ಕೋಲ್ಕತಾ, ಸೆ 10 (DaijiworldNews/DB): ಜೈಲಿನಿಂದ ಬರುವವರನ್ನು ಸ್ವಾಗತಿಸಿ ಗೌರವಿಸಿದಲ್ಲಿ ಮಮತಾ ಬ್ಯಾನರ್ಜಿಯವರು ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಟಿಎಂಸಿ ಮುಖಂಡರಾದ ಅನುಬ್ರತಾ ಮೊಂಡಲ್, ಪಾರ್ಥ ಚಟರ್ಜಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಜನರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಬೇಕೆಂಬ ಮಮತಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಜೈಲಿನಿಂದ ಬಿಡುಗಡೆಗೊಳ್ಳುವವರನ್ನು ಹೀರೋ ಎಂಬಂತೆ ಬಿಂಬಿಸಿ ಅವರನ್ನು ಗೌರವಿಸಲು ಬಯಸಿದರೆ ತಿಹಾರ್ ಜೈಲಿಗೆ ಹೋಗುವುದು ನಿಮಗೆ ಅನಿವಾರ್ಯವಾಗಲಿದೆ ಎಂದಿದ್ದಾರೆ.
2010ರಲ್ಲಿ ಬಿರ್ಬ್ಯೂಮ್ ಜಿಲ್ಲೆಯ ಮಂಗಲ್ ಕೋಟ್ನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೋರ್ಟ್ ಅನುಬ್ರತಾ ಮೊಂಡಲ್ ಮತ್ತು ಇತರ 13 ಮಂದಿಯನ್ನು ಖುಲಾಸೆಗೊಳಿಸಿ ಶುಕ್ರವಾರ ತೀರ್ಪು ನೀಡಿತ್ತು. ಹೀಗಾಗಿ ಅನುಬ್ರತಾ ಮೊಂಡಲ್ ಜೈಲಿನಿಂದ ಬಿಡುಗಡೆಯಾಗುವ ದಿನ ಸನ್ನಿಹಿತವಾಗಿದ್ದು, ಅವರಿಗೆ ಹೀರೋ ರೀತಿಯಲ್ಲಿ ಜನ ಸ್ವಾಗತ ಕೋರಬೇಕೆಂದು ಗುರುವಾರ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು.