ಆಂದ್ರಪ್ರದೇಶ, ಸೆ 10 (DaijiworldNews/MS): ಆನ್ಲೈನ್ ಸಾಲದ ಆ್ಯಪ್ನ ಏಜೆಂಟ್ಗಳ ಕಿರುಕುಳ ಸಹಿಸಲಾಗದೆ ದಂಪತಿಗಳು ತಮ್ಮ ಪುತ್ರಿಯೊಬ್ಬರ ಹುಟ್ಟುಹಬ್ಬದಂದೇ ನೇಣಿಗೆ ಶರಣಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಮೃತ ದಂಪತಿಗಳನ್ನು ದುರ್ಗಾರಾವ್ ಮತ್ತು ರಮ್ಯಾಲಕ್ಷ್ಮಿ ಎಂದು ಗುರುತಿಸಲಾಗಿದೆ.
ದುರ್ಗಾರಾವ್ ಅವರು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಲಬ್ಬರ್ತಿ ಮೂಲದವರಾಗಿದ್ದು, 10 ವರ್ಷಗಳ ಹಿಂದೆ ಜೀವನೋಪಾಯ ಅರಸಿ ರಾಜಮಹೇಂದ್ರವರಂಗೆ ಬಂದಿದ್ದರು. ಆರು ವರ್ಷಗಳ ಹಿಂದೆ ರಮ್ಯಾ ಲಕ್ಷ್ಮಿಯನ್ನು ಮದುವೆಯಾಗಿದ್ದರು. ದಂಪತಿಗೆ ನಾಗ ಸಾಯಿ (4)ಮತ್ತು ಲಿಕಿತಾ ಶ್ರೀ( 2 )ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಕುಟುಂಬವು ರಾಜಮಹೇಂದ್ರವರಂನ ಶಾಂತಿ ನಗರದಲ್ಲಿ ನೆಲೆಸಿತ್ತು.
ದುರ್ಗಾರಾವ್ ಪೈಂಟರ್ ಆಗಿದ್ದು, ಅವರ ಪತ್ನಿ ರಮ್ಯಾ ಲಕ್ಷ್ಮಿ ಟೈಲರ್ ಆಗಿದ್ದರು. ಹಣಕಾಸಿನ ಸಮಸ್ಯೆಯ ಹಿನಲೆಯಲ್ಲಿ ದಂಪತಿಗಳು ಎರಡು ಆನ್ಲೈನ್ ಸಾಲದ ಅಪ್ಲಿಕೇಶನ್ ನಿಂದ ಸಾಲ ಪಡೆದಿದ್ದರು. ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಕಾರಣ ಏಜೆಂಟ್ ಕಿರುಕುಳ ನೀಡಲಾರಂಭಿಸಿದರು. ದಂಪತಿಗಳು ಸಾಲದ ಮೊತ್ತದ ಸ್ವಲ್ಪ ಭಾಗ ಮರುಪಾವತಿಸಿದರೂ ಸಾಲ ತೀರಿಸಲು ಆಗಿರಲಿಲ್ಲ
ಆನ್ಲೈನ್ ಸಾಲದ ಅಪ್ಲಿಕೇಶನ್ ಕಂಪನಿಯು ದಂಪತಿಗಳಿಂದ ಹೆಚ್ಚಿನ ಹಣವನ್ನು ಬೇಡಿಕೆಯಿಡಲು ಪ್ರಾರಂಭಿಸಿದಲ್ಲದೇ , ರಮ್ಯಾ ಲಕ್ಷ್ಮಿ ಅವರ ಅಶ್ಲೀಲ ಹಾಗೂ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು.
ದುರ್ಗಾರಾವ್ ಅವರು 10 ದಿನಗಳ ಹಿಂದೆ ಡೆಲಿವರಿ ಬಾಯ್ ಆಗಿಯೂ ಕೆಲಸವನ್ನು ಮಾಡಿ ಹೆಚ್ಚುವರಿ ಹಣ ಗಳಿಸಲು ಯತ್ನಿಸಿದ್ದಾರೆ. ಆದರೆ ಈ ಮಧ್ಯೆ, ಆನ್ಲೈನ್ ಸಾಲದ ಆ್ಯಪ್ ಕಂಪನಿಯು ರಮ್ಯಾ ಲಕ್ಷ್ಮಿಗೆ ಬೆದರಿಕೆದ್ದು ಮಾರ್ಫ್ ಮಾಡಿದ ಚಿತ್ರವನ್ನು ವಾಟ್ಸಾಪ್ ಮೂಲಕ ಕಳುಹಿಸಿದೆ. ಎರಡು ದಿನಗಳಲ್ಲಿ ಸಂಪೂರ್ಣ ಸಾಲದ ಮೊತ್ತವನ್ನು ಮರುಪಾವತಿಸಲು ವಿಫಲವಾದರೆ ಶೀಘ್ರದಲ್ಲೇ ಆಕೆಯ ಮಾರ್ಫ್ ಮಾಡಿದ ಅಶ್ಲೀಲ ಪೋಟೋ ಆನ್ಲೈನ್ನಲ್ಲಿ ಪೋಸ್ಟ್ ಮಾಡುವುದಾಗಿ ಕಂಪನಿಯು ದಂಪತಿಗಳಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಇದರಿಂದ ಹೆದರಿದ ದಂಪತಿ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ಪ್ರಯಾಣ ಬೆಳೆಸಿ ಹೋಟೇಲ್ ಕೊಠಡಿ ಬುಕ್ ಮಾಡಿ , ಸಂಬಂಧಿಕರಿಗೆ ಕರೆ ಮಾಡಿ ನಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ಅವರು ಪೂರ್ವ ಗೋದಾವರಿ ಜಿಲ್ಲಾಧಿಕಾರಿ ಮಾಧವಿ ಲತಾ ಅವರಿಗೆ ನಿರ್ದೇಶನ ಮಾಡಿ, ತಲಾ ಐದು ಲಕ್ಷ ರೂಪಾಯಿಯನ್ನು ಸಂತ್ರಸ್ತರ ಮಕ್ಕಳಿಗೆ ಹಣಕಾಸು ನೆರವು ನೀಡುವಂತೆ ತಿಳಿಸಿದ್ದಾರೆ. ಕಳೆದ ತಿಂಗಳಷ್ಟೇ ಸರ್ಚ್ ಎಂಜಿನ್ ದೈತ್ಯ ಗೂಗಲ್ 2000ಕ್ಕೂ ಹೆಚ್ಚು ಲೋನ್ ಅಪ್ಲಿಕೇಷನ್ಗಳನ್ನು ಜನವರಿಯಿಂದ ಈಚೆಗೆ ಪ್ಲೇ ಸ್ಟೋರ್ನಿಂದ ಕಿತ್ತೊಗೆದಿದೆ. ನಿಯಮಾವಳಿ ಉಲ್ಲಂಘನೆಗಾಗಿ , ದಾರಿ ತಪ್ಪಿಸುವ ಮಾಹಿತಿಗಾಗಿ ಹಾಗೂ ಪ್ರಶ್ನಾರ್ಹ ಆಫ್ಲೈನ್ ನಡವಳಿಕೆಗಾಗಿ ಈ ತೀರ್ಮಾನ ಮಾಡಲಾಗಿದೆ.