ದೊಡ್ಡಬಳ್ಳಾಪುರ, ಸೆ 10 (DaijiworldNews/MS): ಬಿಜೆಪಿ ನೇತೃತ್ವದ ರಾಜ್ಯ ಸರಕಾರದ 3 ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುವ ಜನೋತ್ಸವಕ್ಕೆ ಬದಲು ಜನಸ್ಪಂದನ ಸಮಾವೇಶ ಇಂದು ದೊಡ್ಡಬಳ್ಳಾಪುರದಲ್ಲಿ ನಡೆಸುತ್ತಿದ್ದು, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪ್ರಹ್ಲಾದ್ ಜೋಷಿ, ಮಾಜಿ ಸಿಎಂ , ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಜನಸ್ಪಂದನ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಕ್ಷೇತ್ರವೊಂದರಿಂದಲೇ 50 ಸಾವಿರ ಜನರನ್ನು ಕರೆ ತರಲು ಸಿದ್ದತೆ ನಡೆಸಲಾಗಿದೆ. ಜನರನ್ನು ಕರೆತರಲು ಇದಕ್ಕಾಗಿ ರಾತ್ರಿಯೇ ಬಸ್ಗಳನ್ನು ಕಳುಹಿಸಲಾಗಿದ್ದು, ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಖಾಸಗಿ ಬಸ್ಗಳ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದಕ್ಕೆ ಸುಮಾರು 876 ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಲ್ಲದೇ ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆ, ತುಮಕೂರಿನಿಂದಲೂ ಜನ ಬರುವ ನಿರೀಕ್ಷೆ ಇದೆ.
ಇನ್ನು ಸಮಾವೇಶ ನಡೆಯುವ ಹಿನ್ನೆಲೆ ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ. ಓರ್ವ ಡಿವೈಎಸ್ಪಿ, ನಾಲ್ವರು ಇನ್ಸ್ಪೆಕ್ಟರ್, 13 ಪಿಎಸ್ಐ, 23 ಎಎಸ್ಐ ಹಾಗೂ 150 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
40 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದ್ದು ಲಕ್ಷಾಂತರ ಜನರು ಪಾಲ್ಗೊಳ್ಳುವ ಹಿನ್ನಲೆ ಅದೇ ಸ್ಥಳದಲ್ಲಿ ತಾತ್ಕಾಲಿಕ ಅಡುಗೆ ಮನೆಯನ್ನೂ ಮಾಡಲಾಗಿದೆ. ಅಲ್ಲಿಯೂ ದೊಡ್ಡದಾಗಿ ಉಪಹಾರ- ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.