ಬೆಂಗಳೂರು, ಸೆ 10 (DaijiworldNews/MS): ಧರ್ಮಸ್ಥಳದ ಸಮೀಪವಿರುವ ಉಜಿರೆ ಬಳಿ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ವಸತಿ ಹಾಗೂ ಮೂಲಸೌಕರ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಿನಿ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡ ಕಳುಹಿಸಲಾಗಿದೆ. 100 ಎಕರೆ ಜಾಗ ಗುರುತಿಸಿ ಸುಸಜ್ಜಿತ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಪ್ರವಾಸಿ ಕಾರಿಡಾರ್ ಅಭಿವೃದ್ಧಿಗೆ ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಎಂದು ವಿವರಿಸಿದ್ದಾರೆ
ಧರ್ಮಸ್ಥಳ ಭಾಗದಲ್ಲಿ ನಾಲ್ಕು ಹೆಲಿಕಾಪ್ಟರ್ಗಳು ಏಕಕಾಲದಲ್ಲಿ ಲ್ಯಾಂಡಿಂಗ್ ಆಗಲು ಅವಕಾಶವಿರುವಂತೆ ಮಿನಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಇದಲ್ಲದೆ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಈ ತಿಂಗಳ 18ರಂದು ಅಡಿಗಲ್ಲು ಹಾಕುತ್ತಿದ್ದು, ಶಿವಮೊಗ್ಗದ ವಿಮಾನ ನಿಲ್ದಾಣ ಈ ವರ್ಷಾಂತ್ಯದ ವೇಳೆಗೆ ಜನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.