ಹರಿಯಾಣ, ಸೆ 10 (DaijiworldNews/MS): ಹರಿಯಾಣದ ಮಹೇಂದರ್ಗಢ್ ಮತ್ತು ಸೋನಿಪತ್ ಜಿಲ್ಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಆರು ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹೇಂದರ್ಗಢದಲ್ಲಿ ನಾಲ್ವರು ಯುವಕರು ಕಾಲುವೆಯಲ್ಲಿ ಮುಳುಗಿದರೆ, ಇಬ್ಬರು ಸೋನಿಪತ್ನ ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು ಏಳು ಅಡಿಯ ವಿಗ್ರಹವನ್ನು ವಿಸರ್ಜನೆಗೆ ಕೊಂಡೊಯ್ಯುತ್ತಿದ್ದಾಗ ಮಹೇಂದರ್ಗಢದಲ್ಲಿ ಕಾಲುವೆಯಲ್ಲಿ ಒಂಬತ್ತು ಯುವಕರು ನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿದ್ದು ಜಿಲ್ಲಾಡಳಿತ ಎನ್ಡಿಆರ್ಎಫ್ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಐವರನ್ನು ರಕ್ಷಿಸಿತ್ತು. ಈ ವೇಳೆ ನಾಲ್ವರು ಮೃತಪಟ್ಟದ್ದರು.
ಆಗಸ್ಟ್ 31ರಿಂದ ಆರಂಭವಾದ 10 ದಿನಗಳ ಗಣೇಶೋತ್ಸವ ಶುಕ್ರವಾರ ಗಣೇಶಮೂರ್ತಿ ವಿಸರ್ಜನೆಯೊಂದಿಗೆ ಮುಕ್ತಾಯವಾಗಿದೆ. ಹತ್ತು ದಿನಗಳ ಕಾಲ ಪೂಜಿಸಿದ ಗಣೇಶಮೂರ್ತಿಯನ್ನು ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ಪಕ್ಕದ ಕೆರೆ, ನದಿ ಅಥವಾ ಸರೋವರಗಳಲ್ಲಿ ಮುಳುಗಿಸಲಾಗುತ್ತದೆ.