ಕೋಲ್ಕತ್ತ, ಸೆ 09 (DaijiworldNews/DB): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವ್ಯಂಗ್ಯಚಿತ್ರ ಹೊಂದಿರುವ ಟಿ ಶರ್ಟ್ನ್ನು ತೃಣಮೂಲ ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಅಲ್ಲದೆ ಚಿತ್ರದ ಕೆಳಗೆ ಭಾರತದ ಅತಿದೊಡ್ಡ ಪಪ್ಪು ಎಂದು ಬರೆದಿದೆ.
ಅಮಿತ್ ಶಾ ವಿರುದ್ದ ರಾಜಕೀಯ ದಾಳಿ ನಡೆಸಲು ಮುಂದಾಗಿರುವ ಟಿಎಂಸಿ, ಅದಕ್ಕಾಗಿ ಟಿ ಶರ್ಟ್ನ್ನು ಆರಿಸಿಕೊಂಡಿದೆ. ಇದನ್ನು ತನ್ನ ಕಾರ್ಯಕರ್ತರಿಗೆ ಧರಿಸಲು ನೀಡಿದೆ. ವಿವಿಧ ಬಣ್ಣಗಳಲ್ಲಿ ಟಿ ಶರ್ಟ್ ಲಭ್ಯವಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ನಡೆಯುವ ದುರ್ಗಾಪೂಜೆ ಸಂದರ್ಭದಲ್ಲೇ ಇದನ್ನು ಪ್ರಚಾರ ಮಾಡಲು ಪಕ್ಷ ಮುಂದಾಗಿದೆ ಎಂದು ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್ ಓಬ್ರಿಯಾನ್ ತಿಳಿಸಿರುವುದಾಗಿ ವರದಿಯಾಗಿದೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಂದ ಈ ರೀತಿಯ ಅಣಕ ಮೊದಲು ಪ್ರಾರಂಭವಾಯಿತು. ಸಾಮಾಜಿಕ ಜಾಲತಾಣದಲ್ಲಿ ಆನಂತರ ಇದು ಹೆಚ್ಚು ವೈರಲ್ ಆಗಿದ್ದು, ಇದೀಗ ಗೃಹ ಸಚಿವರನ್ನು ಅಣಕಿಸಲು ಟಿಎಂಸಿಯು ಟಿ ಶರ್ಟ್ ವಿನ್ಯಾಸಗೊಳಿಸಿದೆ. ಮೊದಲಿಗೆ ಆನ್ಲೈನ್ನಲ್ಲಿ ಶರ್ಟುಗಳು ಲಭ್ಯವಿದ್ದರೆ ಈಗ ಸಗಟು ಮಾರುಕಟ್ಟೆಯಲ್ಲೂ ಲಭ್ಯವಿವೆ ಎಂದವರು ತಿಳಿಸಿದ್ದಾರೆ ಎನ್ನಲಾಗಿದೆ.