ತುಮಕೂರು, ಸೆ 09 (DaijiworldNews/DB): ಚಿಕ್ಕಸಾರಂಗಿ ಸರಕಾರಿ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕಿಯೊಬ್ಬರು ಶಾಲೆಯಲ್ಲೇ ಮದ್ಯ ಸೇವಿಸಿ ಅಧಿಕಾರಿಗಳ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಗಂಗಲಕ್ಷ್ಮಮ್ಮ ಮದ್ಯ ಸೇವಿಸಿ ಸಿಕ್ಕಿ ಬಿದ್ದ ಶಿಕ್ಷಕಿ. ಕಳೆದ 25ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗಂಗಲಕ್ಷ್ಮಮ್ಮ 5 ವರ್ಷಗಳಿಂದ ಮದ್ಯ ವ್ಯಸನದ ಚಟ ಅಂಟಿಸಿಕೊಂಡಿದ್ದರು. ಮದ್ಯ ಸೇವಿಸಿ ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಇಂತಹ ಸಮಯದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮಸ್ಥರೊಂದಿಗೆ ಶಾಲೆಗೆ ಆಗಮಿಸಿದ ವೇಳೆ ಗಂಗಲಕ್ಷ್ಮಮ್ಮ ಅಧಿಕಾರಿಗಳು ಮತ್ತು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಶಿಕ್ಷಕಿಯ ಟೇಬಲ್ನ ಡ್ರಾಯರ್ನಲ್ಲಿ ಪರಿಶೀಲಿಸಿದಾಗ ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಈ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.