ಬೆಂಗಳೂರು, ಸೆ 09 (DaijiworldNews/DB): ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲು ಬಂದ ಪೊಲೀಸರಿಗೆ ಆಟಿಕೆ ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಕೇರಳದ ಕುರುತಿಕಾಡ್ ನಿವಾಸಿ ಜಾಫರ್ (32) ಬಂಧಿತ ಆರೋಪಿ. ಈತನನ್ನು ಎಚ್ಎಸ್ಆರ್ ಲೇಔಟ್ ಪೊಲೀಸರ ಸಹಾಯದಿಂದ ಕೇರಳ ಪೊಲೀಸರು ವಶಕ್ಕೆ ಪಡೆದುಕೊಂಡರು. ಬಾಡಿವಾರೆಂಟ್ ಮೇಲೆ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಕಳೆದ 15 ದಿನಗಳ ಹಿಂದೆ ಆರೋಪಿ ವಿರುದ್ದ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆತನ ಮೊಬೈಲ್ ಲೊಕೇಶನ್ ಆಧರಿಸಿ ಠಾಣೆಯ ಪಿಎಸ್ಐ ಸುನೋಮೋನ್ ಹಾಗೂ ಕಾನ್ಸ್ಟೇಬಲ್ಗಳಾದ ಸತೀಶ್ ಕುಮಾರ್, ಸಾಥಿಕ್ ಪಾಶಾ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಎಚ್ಎಸ್ಆರ್ ಲೇಔಟ್ನಲ್ಲಿರುವ ಹೊಟೇಲ್ವೊಂದಕ್ಕೆ ಆರೋಪಿ ಊಟಕ್ಕೆ ತೆರಳಿದ್ದ. ಆತನನ್ನು ಬೆನ್ನು ಹತ್ತಿದ ಪೊಲೀಸರು ಆತನನ್ನು ಬಂಧಿಸಲು ಮುಂದಾದಾಗ ತನ್ನ ಬಳಿ ಇದ್ದ ಆಟಿಕೆ ಪಿಸ್ತೂಲ್ ತೋರಿಸಿ ಆರೋಪಿ ಪರಾರಿಯಾಗಿದ್ದ. ಬಳಿಕ ಕಾರಿನಲ್ಲಿ ಕೇರಳಕ್ಕೆ ಹೋಗಿದ್ದ. ಬಳಿಕ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಲ್ಲಿನ ಪೊಲೀಸರು ಆತನ ಬಗ್ಗೆ ನಿಗಾ ವಹಿಸಿದ್ದರು. ಆತನ ಕೇರಳದಲ್ಲಿ ತಲೆಮರೆಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಎಚ್ಎಸ್ಆರ್ ಲೇಔಟ್ ಪೊಲೀಸರು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿಯಾಧರಿಸಿ ಆರೋಪಿಯನ್ನು ಹುಡುಕಾಡಿದಾಗ ಆತನ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.