ಬೆಂಗಳೂರು, ಸೆ 09 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ಯಾವ ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಪ್ರಧಾನಿಗಿಂತಲೂ ಈ ವಿಚಾರದಲ್ಲಿ ಮುಂದಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಾಗಲೀ, ರಾಜ್ಯದಲ್ಲಾಗಲೀ ಕೇವಲ ಕಾಲಹರಣವಾಗುತ್ತಿದೆಯೇ ಹೊರತು ಯಾವುದೇ ಅಭಿವೃದ್ದಿ ಕೆಲಸ ನಡೆಯುತ್ತಿಲ್ಲ ಎಂದು ಕಿಡಿ ಕಾರಿದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಜವ ನಿತಿನ್ ಗಡ್ಕರಿ ಅವರ ಮಾತನ್ನು ಕೇಂದ್ರದಲ್ಲಿ ಯಾರೂ ಆಲಿಸುತ್ತಿಲ್ಲ. ಅದಕ್ಕಾಗಿ ಅವರು ಕರ್ನಾಟಕ ಸಿಎಂ ಬೊಮ್ಮಾಯಿಯವರ ಬಳಿ ಬಂದು ಮಾತನಾಡುತ್ತಿದ್ದಾರೆ. ಆದರೆ ಇದರಿಂದ ಏನು ಸಾಧ್ಯವಿದೆ ಎಂದು ಪ್ರಶ್ನಿಸಿದರು.
ಗಡ್ಕರಿ ಮಾತಿಗೆ ಕೇಂದ್ರ ಸರ್ಕಾರದಲ್ಲಿ ಮನ್ನಣೆ ನೀಡುತ್ತಿಲ್ಲ. ಈಗಾಗಲೇ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯಿಂದ ತೆಗೆದು ಹಾಕಲಾಗಿದೆ. ಇನ್ನು ಮಾರ್ಗದರ್ಶಕ ಮಂಡಳಿಗೆ ಸೇರುವ ದಾರಿಯಲ್ಲಿ ಅವರಿದ್ದಾರೆ ಎಂದು ವ್ಯಂಗ್ಯವಾಡಿದರು.