ಚೆನ್ನೈ, 09 (DaijiworldNews/MS): ನಾನು ಕಾಂಗ್ರೆಸ್ ಅಧ್ಯಕ್ಷನಾಗುತ್ತೇನೆಯೇ ಅಥವಾ ಇಲ್ಲವೇ ಎಂಬುದು ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಚುನಾವಣೆ ನಡೆದಾಗ ಸ್ಪಷ್ಟವಾಗುತ್ತದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಯಲ್ಲಿ ಮಾತನಾಡಿದ ಅವರು, "ನಾನು ಕಾಂಗ್ರೆಸ್ ಅಧ್ಯಕ್ಷನಾಗುತ್ತೇನೆಯೇ ಅಥವಾ ಇಲ್ಲವೇ ಗೊತ್ತಿಲ್ಲ. ಆದರೆ ನಾನು ಏನು ಮಾಡಬೇಕೆಂದು ನಾನು ಈಗಾಗಲೇ ಸ್ಪಷ್ಟವಾಗಿ ನಿರ್ಧರಿಸಿದ್ದೇನೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ" ಎಂದು ಹೇಳಿದ್ದಾರೆ.
"ಯಾತ್ರೆಯಿಂದ ನನ್ನ ಬಗ್ಗೆ ಮತ್ತು ಈ ಸುಂದರ ದೇಶದ ಬಗ್ಗೆ ಸ್ವಲ್ಪ ತಿಳುವಳಿಕೆ ಪಡೆಯುತ್ತೇನೆ ಮತ್ತು ಈ ಎರಡು-ಮೂರು ತಿಂಗಳಲ್ಲಿ ನಾನು ಈ ಜ್ಞಾನಗಳಿಸುತ್ತೇನೆ. ಬಿಜೆಪಿ ಈ ದೇಶದ ಎಲ್ಲಾ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಮತ್ತು ಅವುಗಳ ಮೂಲಕ ಒತ್ತಡ ಹೇರಿದೆ. ನಾವು ಇನ್ನು ಮುಂದೆ ರಾಜಕೀಯ ಪಕ್ಷವಾಗಿ ಹೋರಾಡುವುದಿಲ್ಲ. ನಮಗೆ, ಈ ಯಾತ್ರೆಯಿಂದ ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಬಿಜೆಪಿಯ ಸಿದ್ಧಾಂತವು ಈ ದೇಶಕ್ಕೆ ಉಂಟುಮಾಡಿದ ಹಾನಿ ಮತ್ತು ದ್ವೇಷದ ವಿರುದ್ಧ ನಾವು ಈ ಯಾತ್ರೆಯನ್ನು ಕೈಗೊಂಡಿದ್ದೇವೆ" ಎಂದು ಹೇಳಿದ್ದಾರೆ.