ಬೆಂಗಳೂರು, ಸೆ 09 (DaijiworldNews/DB): ರಾಜಕಾಲುವೆ, ಕೆರೆಗಳ ಹೂಳು ತೆಗೆಯದೇ ಸರ್ಕಾರ ಮತ್ತು ಬಿಬಿಎಂಪಿ ಬೇಜವಾಬ್ದಾರಿ ವಹಿಸಿದ್ದರಿಂದಾಗಿ ಬೆಂಗಳೂರಿಗೆ ಮಳೆಗಾಲದಲ್ಲಿ ದುಸ್ಥಿತಿ ಬಂದೊದಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಹೊಣೆಗೇಡಿತನದಿಂದಾಗಿ ನಗರದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಮಳೆ, ಪ್ರವಾಹದಿಂದಾಗಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೂ ಸರ್ಕಾರ ಮುಂದಾಗದಿರುವುದು ದುರಂತ ಎಂದರು.
ತನ್ನ ಅವಧಿಯಲ್ಲಾಗಿರುವ ತಪ್ಪುಗಳನ್ನು ಹಿಂದಿನ ಸರ್ಕಾರ ಕಾರಣ ಎನ್ನುವುದರ ಮೂಲಕ ಸರ್ಕಾರ ತಪ್ಪುಗಳಿಗೆ ತೇಪೆ ಹಾಕುವ ಪ್ರಯತ್ನ ಮಾಡುತ್ತಿದೆ. ಮುಖ್ಯಮಂತ್ರಿಯವರು ಉಂಡಾಡಿ ಗುಂಡನಂತೆ ಮೈಗಳ್ಳರಾಗಿದ್ದಾರೆ ಎಂದು ಲೇವಡಿ ಮಾಡಿದರು.
1953 ಒತ್ತುವರಿ ಪ್ರಕರಣಗಳನ್ನು ಬೇಧಿಸಿ ಆ ಪೈಕಿ 1300 ಒತ್ತುವರಿಗಳನ್ನು ತೆರೆವುಗೊಳಿಸುವ ಕೆಲಸವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾಗಿತ್ತು. ಈ ಎಲ್ಲಾ ದಾಖಲೆ ಸರ್ಕಾರದ ಬಳಿಯಿದ್ದು, ಅವರು ಮೈಗಳ್ಳತನ ಬಿಟ್ಟು ಗಮನಿಸಿ ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ ದೊರಕಿಸಬಹುದು ಎಂದವರು ಇದೇ ವೇಳೆ ತಿಳಿಸಿದರು.
ರಾಜಕಾಲುವೆ ಹೂಳೆತ್ತಲು ಸಾವಿರಾರು ಕೋಟಿ ರೂ. ನೀಡಿದ್ದೇವೆ ಎಂದು ಸಿಎಂ ಹೇಳುತ್ತಾರೆ. ಆದರೆ ವಾಸ್ತವವಾಗಿ ಯಾವುದೇ ಕೆಲಸ ಆಗಿಲ್ಲ. ಹಾಗಾದರೆ ಅವರು ನೀಡಿದ ಹಣ ಯಾರ ಜೇಬು ಸೇರಿದೆ ಎಂದು ಪ್ರಶ್ನಿಸಿದರು.