ನವದೆಹಲಿ, ಸೆ 09 (DaijiworldNews/DB): ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ಷರತ್ತಿನೊಂದಿಗೆ ಗೋವಾದ ಅಂಜುನಾ ಪ್ರದೇಶದಲ್ಲಿರುವ ಕರ್ಲೀಸ್ ರೆಸ್ಟೋರೆಂಟ್ ಧ್ವಂಸಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು (ಸಿಆರ್ಝಡ್) ಉಲ್ಲಂಘಿಸಿ ಈ ರೆಸ್ಟೋರೆಂಟ್ನ್ನು ನಿರ್ಮಿಸಲಾಗಿರುವುದರಿಂದ ಇದನ್ನು ಧ್ವಂಸಗೊಳಿಸಲು ಗೋವಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್ಜಿಟಿ) ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಇಂದು ರೆಸ್ಟೋರೆಂಟ್ ಧ್ವಂಸಕ್ಕೆ ತಯಾರಿ ನಡೆಸಲಾಗಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ಈ ಧ್ವಂಸ ಕಾರ್ಯಕ್ಕೆ ತಡೆಯಾಜ್ಞೆ ನೀಡಿದೆ. ರೆಸ್ಟೋರೆಂಟ್ನಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಾರದೆಂಬ ಷರತ್ತಿನೊಂದಿಗೆ ಸುಪ್ರೀಂ ರೆಸ್ಟೋರೆಂಟ್ ಧ್ವಂಸಕ್ಕೆ ತಡೆ ನೀಡಿದೆ ಎಂದು ತಿಳಿದು ಬಂದಿದೆ.
ಉತ್ತರ ಗೋವಾದ ಪ್ರಸಿದ್ಧ ಅಂಜುನಾ ಬೀಚ್ ಬಳಿ ಇರುವ ಕರ್ಲೀಸ್ ರೆಸ್ಟೋರೆಂಟ್ನಲ್ಲಿ ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರು ಸಾವಿನ ಕಾರಣಕ್ಕೆ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಇಲ್ಲಿ ನಡೆದ ಪಾರ್ಟಿ ವೇಳೆ ಆರೋಪಿಗಳಿಬ್ಬರು ಮಾದಕ ವಸ್ತು ಬೆರೆಸಿ ನೀಡಿದ್ದ ಪಾನೀಯ ಸೇವಿಸಿ ಅವರು ಸಾವನ್ನಪ್ಪಿದ್ದರು.