ಜೋಧ್ಪುರ, ಸೆ 09 (DaijiworldNews/DB): ಒಂದು ವರ್ಷದ ಮಗುವಾಗಿದ್ದಾಗ ನೆರವೇರಿದ್ದ ಪ್ರಸ್ತುತ 21 ವರ್ಷದ ಯುವತಿಯ ವಿವಾಹವನ್ನು ಅನೂರ್ಜಿತಗೊಳಿಸಿ ರಾಜಸ್ಥಾನದ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ.
ಯುವತಿ ಒಂದು ವರ್ಷದ ಮಗುವಾಗಿದ್ದಾಗಲೇ ಪೋಷಕರು ಆಕೆಯನ್ನು ತಮ್ಮದೇ ಹಳ್ಳಿಯ ಯುವಕನೊಂದಿಗೆ ಮದುವೆ ಮಾಡಿದ್ದರು. ಆದರೆ ಈ ವಿಚಾರ ಗೊತ್ತಾದ ಬಳಿಕ ನೊಂದಿದ್ದ ಯುವತಿ ತನಗೆ ನ್ಯಾಯ ಕೊಡಿಸಬೇಕೆಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಗುರುವಾರ ಈ ಕುರಿತು ವಿಚಾರಣೆ ನಡೆದಿದ್ದು, ಕೌಟುಂಬಿಕ ನ್ಯಾಯಾಲಯದ ಅಧ್ಯಕ್ಷ ಪ್ರದೀಪ್ ಕುಮಾರ್ ಮೋದಿ ಅವರು ಈ ವಿವಾಹವನ್ನು ರದ್ದುಗೊಳಿಸಿ ಆದೇಶಿಸಿದರು. ಅಲ್ಲದೆ ಬಾಲ್ಯ ವಿವಾಹ ನಿರ್ಮೂಲನೆಗೆ ಎಲ್ಲರೂ ಕಠಿಬದ್ದರಾಗಬೇಕೆಂದು ಮನವಿ ಮಾಡಿದರು.
ಕೆಲ ವರ್ಷಗಳ ಹಿಂದೆ ಮದುವೆ ಸಂಬಂಧಿಸಿದ ಗೌನ ಎಂಬ ಆಚರಣೆಯೊಂದಕ್ಕಾಗಿ ಆಕೆಯ ಮೇಲೆ ಆಕೆಯ ಅತ್ತಿಯಂದಿರು ಒತ್ತಡ ಹಾಕಿದ್ದರು. ಆದರೆ ನರ್ಸ್ ಕೋರ್ಸ್ ಕಲಿಯುತ್ತಿದ್ದ ಆಕೆ ತನ್ನ ಕನಸನ್ನು ನನಸು ಮಾಡುವ ತಯಾರಿಯಲ್ಲಿದ್ದು, ಮದುವೆ ಸಂಪ್ರದಾಯವನ್ನು ನೆರವೇರಿಸಲು ನಿರಾಕರಣೆ ಮಾಡಿದರು. ಇದರಿಂದ ಕುಪಿತಗೊಂಡ ಸಂಬಂಧಿಕರು ಜಾತಿ ಪಂಚಾತಿಕೆ ನಡೆಸಿ ಆಕೆಗೆ ಹತ್ತು ಲಕ್ಷ ರೂ. ದಂಡ ವಿಧಿಸಿದ್ದಲ್ಲದೆ ಕುಟುಂಬಕ್ಕೂ ಬೆದರಿಕೆ ಹಾಕಿದ್ದಾರೆ ಎಂದು ಸಾರಥಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೀರ್ತಿ ಭಾರ್ತಿ ಎಂಬವರು ಹೇಳಿಕೆ ನೀಡಿದ್ದರು.