ಬೆಂಗಳೂರು, ಸೆ 09 (DaijiworldNews/DB): ಜನಸ್ಪಂದನಕ್ಕೆ ಮೊದಲು ಜಲಸ್ಪಂದನ ಕೆಲಸವನ್ನು ರಾಜ್ಯ ಬಿಜೆಪಿ ನಾಯಕರು ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ರಸ್ತೆಯಲ್ಲಿ ನೀರು ನಿಲ್ಲುವುದಲ್ಲದೆ, ಮನೆಗಳಿಗೂ ನೀರು ನುಗ್ಗಿ ಸಾಕಷ್ಟು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಬೆಲೆ ಬಿಜೆಪಿ ಸರ್ಕಾರಕ್ಕೆ ತಿಳಿದಿಲ್ಲ. ಅವರ ಸಾಧನೆ ಹೇಳಿಕೊಳ್ಳಲು ಜನಸ್ಪಂದನ ಮಾಡುತ್ತಿದ್ದಾರೆ. ಆದರೆ ಅದಕ್ಕೂ ಮೊದಲು ಜಲಸ್ಪಂದನ ಕೆಲಸ ಮಾಡಿ ಮಳೆಯಿಂದಾಗಿ ಸಂಕಷ್ಟ ಪಡುತ್ತಿರುವ ಜನರಿಗೆ ಸ್ಪಂದಿಸಲಿ ಎಂದರು.
ಐಟಿ ಕಾರಿಡಾರ್ನಲ್ಲಿ ಬೋಟ್ ಫ್ಯಾಕ್ಟರಿ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ ಕೆಲವೆಡೆ ಜನ ಮನೆಯಿಂದ ಹೊರ ಬಾರಲೂ ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಾಗುತ್ತಿರುವುದು ಸರ್ಕಾರಕ್ಕೆ ತಿಳಿಯುತ್ತಿಲ್ಲ. ದೇಶಕ್ಕೆ ಸುಮಾರು ಶೇ. 30ರಷ್ಟು ಆದಾಯ ಬೆಂಗಳೂರಿನಿಂದಲೇ ಹೋಗುತ್ತಿದ್ದು, ಬೆಂಗಳೂರಿನ ಬೆಲೆಯನ್ನು ಸರ್ಕಾರ ಅರ್ಥೈಸಿಕೊಳ್ಳುತ್ತಿಲ್ಲ ಎಂದವರು ಕಿಡಿ ಕಾರಿದರು.
ಜನ ಕಾಂಗ್ರೆಸ್ಗೆ ಅವಕಾಶ ನೀಡಿದರೆ ನಿಮಗೆ ಉತ್ತಮ ಬದುಕು ಕಲ್ಪಿಸಿಕೊಡುವಂತ ಆಡಳಿತ ನೀಡುತ್ತೇವೆ. ಬೆಂಗಳೂರಿನ ಬ್ರಾಂಡ್ನ್ನು ಪುನಃಸ್ಥಾಪಿಸುತ್ತೇವೆ ಎಂದವರು ಇದೇ ವೇಳೆ ತಿಳಿಸಿದರು.