ಪಣಜಿ, ಸೆ 09 (DaijiworldNews/MS): ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರನ್ನು ಮದ್ಯದಲ್ಲಿ ವಿಷ ಬೆರೆಸಿ ಹತ್ಯೆ ಮಾಡಲು ಬಳಸಿಕೊಂಡಿದ್ದ ಗೋವಾದ ಕರ್ಲೀಸ್ ರೆಸ್ಟೋರೆಂಟ್ನ ಮೇಲೆ ಬುಲ್ಡೋಜರ್ ಚಲಿಸಲಿದ್ದು ಈ ಕಟ್ಟಡ ಶೀಘ್ರದಲ್ಲೇ ಧ್ವಂಸಗೊಳ್ಳಲಿದೆ.
ಕರಾವಳಿ ತೀರ ರಕ್ಷಣೆ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಈ ಹಿಂದೆ ಗೋವಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್ಜಿಟಿ) ಎತ್ತಿ ಹಿಡಿದಿದೆ.
ಜುಲೈನಲ್ಲಿ ನಡೆದ ಅಂತಿಮ ವಿಚಾರಣೆಯಲ್ಲಿ ಗೋವಾ ಕರಾವಳಿ ಪ್ರಾಧಿಕಾರವು ರೆಸ್ಟೋರೆಂಟ್ ಕಟ್ಟಡವನ್ನು ಕೆಡವಲು ಆದೇಶ ನೀಡಿತ್ತು. ಅದನ್ನು ಗೋವಾದಲ್ಲಿರುವ ಬಾಂಬೆ ಹೈಕೋರ್ಟ್ ಪೀಠ ಮತ್ತು ಸುಪ್ರೀಂ ಕೋರ್ಟ್ನಲ್ಲಿ ರೆಸ್ಟೋರೆಂಟ್ ಮಾಲೀಕರು ಪ್ರಶ್ನಿಸಿದ್ದರು. ಅಲ್ಲದೇ ಎನ್ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಸೋನಾಲಿ ಫೋಗಟ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಸಂದರ್ಭದಲ್ಲೇ ಹಸಿರು ನ್ಯಾಯಮಂಡಳಿಯ ಈ ಆದೇಶ ಬಂದಿರುವುದು ಕಾಕತಾಳೀಯ. ಈ ಘಟನೆಯ ಮೊದಲು, ಸೋನಾಲಿ ಫೋಗಟ್ ಕೊನೆಯದಾಗಿ ಕರ್ಲೀಸ್ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡಿದ್ದರು.
ಗೋವಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಹೊರಡಿಸಿದ್ದ ಆದೇಶದ ವಿರುದ್ಧ ರೆಸ್ಟೋರೆಂಟ್ ಮಾಲೀಕ ಲಿನೆಟ್ ನ್ಯೂನ್ಸ್ ಅವರು ಹಸಿರು ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ರೆಸ್ಟೋರೆಂಟ್ ವಿರುದ್ದ ಕಾಶಿನಾಥ್ ಶೆಟ್ಟಿ ಎಂಬವರು ಗೋವಾ ಕರಾವಳಿ ನಿರ್ವಹಣಾ ಪ್ರಾಧಿಕಾರದ ಮುಂದೆ ನಿಯಮ ಉಲ್ಲಂಘನೆ ಆರೋಪದಡಿ ದೂರು ಸಲ್ಲಿಸಿದ್ದರು. ಆ ಅರ್ಜಿಯನ್ನು ಆಲಿಸಿದ ಪ್ರಾಧಿಕಾರ ಅದನ್ನು ಕೆಡವಲು ಆದೇಶ ಹೊರಡಿಸಿತ್ತು. ಇದಾದ ಬಳಿಕ ರೆಸ್ಟೋರೆಂಟ್ ಮಾಲೀಕರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ವಿಚಾರದಲ್ಲಿ ಎನ್ಜಿಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೇಳಿತ್ತು. ಇದೀಗ ಎನ್ಜಿಟಿ ಕೂಡ ಪ್ರಾಧಿಕಾರದ ಆದೇಶಕ್ಕೆ ಮುದ್ರೆ ಬಿದ್ದಿದ್ದು, ರೆಸ್ಟೋರೆಂಟ್ ಧ್ವಂಸ ಮಾಡುವ ನಿರ್ಧಾರ ಸರಿಯಾಗಿದೆ ಎಂದು ಹೇಳಿದೆ.