ನವದೆಹಲಿ, ಸೆ 08 (DaijiworldNews/DB): ಕೇಂದ್ರ ಸರ್ಕಾರದಿಂದ ಮಾತ್ರ ಹಣದುಬ್ಬರ ನಿಭಾಯಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.
ಗುರುವಾರ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ಆರ್ಬಿಐಯು ಹಣದುಬ್ಬರ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ವಿತ್ತೀಯ ನೀತಿಗಳೊಂದಿಗೆ ರಾಜ್ಯಗಳೆಲ್ಲವೂ ಸಮನ್ವಯದಿಂದ ಕೆಲಸ ಮಾಡಿದರೆ ಹಣದುಬ್ಬರ ನಿಯಂತ್ರಿಸುವುದು ಸಾಧ್ಯವಿದೆ ಎಂದರು.
ಇಂಧನ ಬೆಲೆಯನ್ನು ಕಡಿತಗೊಳಿಸದ ರಾಜ್ಯಗಳಲ್ಲೇ ಹಣದುಬ್ಬರ ಹೆಚ್ಚಿದೆ. ಇದು ರಾಷ್ಟ್ರೀಯ ಮಟ್ಟಕ್ಕಿಂತ ಅಧಿಕವಾಗಿದೆ ಎಂದ ಅವರು, ಮಾರುಕಟ್ಟೆ ರಚನೆ, ಜಿಎಸ್ಟಿ, ಟೋಲ್, ತೆರಿಗೆ ತೆಗೆದು ಹಾಕುವದುಉ ಸೇರಿದಂತೆ ಹಲವು ವಿಚಾರಗಳನ್ನಾಧರಿಸಿ ರಾಜ್ಯದಿಂದ ರಾಜ್ಯಕ್ಕೆ ಹಣದುಬ್ಬರ ಬದಲಾವಣೆಯಾಗುತ್ತದೆ. ಸಾಧ್ಯವಾದಷ್ಟು ಎರಡು ಬಾರಿ ಪೆಟ್ರೋಲ್ ಬೆಲೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ ಎಂದವರು ತಿಳಿಸಿದರು.
ರಾಜ್ಯಗಳು ಕ್ರಮಗಳನ್ನು ಕೈಗೊಂಡಾಗ ಹಣದುಬ್ಬರ ನಿಭಾಯಿಸಲು ಸುಲಭವಾಗುತ್ತದೆ. ಕ್ರಮ ಕೈಗೊಳ್ಳದೆ ಇದ್ದಾಗ ಅಂತಹ ರಾಜ್ಯಗಳಲ್ಲಿ ಹಣದುಬ್ಬರವಾಗಿ ಅದು ಒತ್ತಡಕ್ಕೂ ಕಾರಣವಾಗುತ್ತದೆ. ಕೇವಲ ಕೇಂದ್ರದ ಕಡೆಗೆ ಮಾತ್ರ ಬೆರಳು ತೋರಿಸಿದರೆ ಅದು ಅಸಾಧ್ಯ ಎಂದವರು ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.