ಮುಂಬೈ, ಸೆ 08 (DaijiworldNews/DB): ಭದ್ರತಾ ಅಧಿಕಾರಿಯ ಸೋಗಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಸಮೀಪ ಸುಳಿದಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ವ್ಯಕ್ತಿಯನ್ನು ಮಹಾರಾಷ್ಟ್ರದ ಧುಲೆ ನಿವಾಸಿ ಹೇಮಂತ್ ಪವಾರ್ (32) ಎಂದು ಗುರುತಿಸಲಾಗಿದ್ದು, ಈತ ಆಂಧ್ರ ಪ್ರದೇಶದ ಸಂಸದರೊಬ್ಬರ ಖಾಸಗಿ ಭದ್ರತಾ ಸಿಬಂದಿ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಸೋಮವಾರ ಅಮಿತ್ ಶಾ ಅವರು ಮುಂಬೈಗೆ ಭೇಟಿ ನೀಡಿದ್ದಾಗ ಘಟನೆ ನಡೆದಿದ್ದು, ಆ ಮೂಲಕ ಬಹುದೊಡ್ಡ ಭದ್ರತಾ ಲೋಪವೊಂದು ಮುನ್ನೆಲೆಗೆ ಬಂದಿದೆ. ಗೃಹ ಸಚಿವಾಲಯದ ಭದ್ರತಾ ಸಿಬಂದಿಯ ಸೋಗಿನಲ್ಲಿದ್ದ ಈ ವ್ಯಕ್ತಿ ಗಂಟೆಗಟ್ಟಲೆ ಗೃಹ ಸಚಿವರ ಬಳಿಯೇ ಅಲೆದಾಡಿದ್ದಾನೆ. ಅಲ್ಲದೆ ಈತ ಗೃಹ ಸಚಿವಾಲಯದ ಗುರುತಿನ ಚೀಟಿ ಪಟ್ಟಿಯನ್ನೂ ಹೊಂದಿದ್ದು, ಅದನ್ನು ಧರಿಸಿಕೊಂಡು ಗೃಹ ಸಚಿವರ ಬೆಂಗಾವಲು ಪಡೆಯೊಂದಿಗೆ ತಿರುಗಾಡಿದ್ದಾನೆ. ಆದರೆ ತನ್ನ ನೈಜ ಗುರುತನ್ನು ಮರೆ ಮಾಚಿದ್ದ. ಇನ್ನೊಂದೆಡೆ ಇದೇ ವ್ಯಕ್ತಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಿವಾಸದ ಹೊರ ಭಾಗದಲ್ಲಿ ಬ್ಲೇಜರ್ ಧರಿಸಿ ನಡೆದುಕೊಂಡು ಹೋಗುತ್ತಿರುವುದು ಕೂಡಾ ತಿಳಿದು ಬಂದಿದೆ ಎನ್ನಲಾಗಿದೆ. ಗೃಹ ಸಚಿವಾಲಯದ ಅಧಿಕಾರಿಯೊಬ್ಬರ ದೂರಿನ ಮೇರೆಗೆ ಮುಂಬೈ ಪೊಲೀಸರು ವ್ಯಕ್ತಿಯನ್ನು ಬಂಧಿಸಿದರು.