ನವದೆಹಲಿ, ಸೆ 08 (DaijiworldNews/DB): ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದರ ವಿರುದ್ಧದ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಮೂರನೇ ದಿನದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿಂದು ನಡೆಯಿತು. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಮೂರು ದಿನಗಳಿಂದ ಸುಪ್ರೀಂಕೋರ್ಟ್ನಲ್ಲಿ ಅರ್ಜಿಗಳ ವಿಚಾರಣೆ ನಡೆಯುತ್ತಿದ್ದು, ಇಂದೂ ಕೂಡಾ ವಾದ-ಪ್ರತಿವಾದಗಳು ನಡೆದವು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ಮಕ್ಕಳ ಶಿಕ್ಷಣವನ್ನು ಸರ್ಕಾರ ಕೇವಲ ಧಿರಿಸಿನ ವಿಚಾರದಲ್ಲಿ ಹಾಳು ಮಾಡುತ್ತಿದೆ ಎಂದು ದೂರಿದರು. ಈ ವೇಳೆ ಪ್ರತಿಕ್ರಿಯಿಸಿದ ಪೀಠವು ಮಿಡಿ, ಸ್ಕರ್ಟ್ ಧರಿಸಿ ಮಕ್ಕಳು ಶಾಲೆಯೊಳಗೆ ಬರಬಹುದೇ ಎಂದು ಪ್ರಶ್ನಿಸಿ, ಬಟ್ಟೆ ಮತ್ತು ಶಿಕ್ಷಣಕ್ಕೆ ಸಂಬಂಧವಿಲ್ಲ ಎಂದು ಪ್ರತಿಪಾದಿಸಿತು.
ಹಲವು ವಾದ ಮತ್ತು ಪ್ರತಿವಾದಗಳ ನಂತರ ಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.