ಕೋಲ್ಕತ್ತಾ, ಸೆ 08 (DaijiworldNews/DB): ನಾನು ಬಿಜೆಪಿ ಸೇವಕಿಯಲ್ಲ. ನೇತಾಜಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ ಅವರು, ಗುರುವಾರ ಸಂಜೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ನೇತಾಜಿ ಪ್ರತಿಮೆ ಲೋಕಾರ್ಪಣೆಗೊಳ್ಳಲಿದ್ದು, ಸಂಜೆ 6 ಗಂಟೆಗೆ ನೀವು ಹಾಜರಿರಬೇಕು ಎಂದು ಅಧಿಕಾರಿಯೊಬ್ಬರು ನನಗೆ ಪತ್ರ ಬರೆದಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೆ ಹೇಗೆ ಪತ್ರ ಬರೆಯಬೇಕೆಂದು ಅಧೀನ ಕಾರ್ಯದರ್ಶಿಗೆ ಗೊತ್ತಿಲ್ಲ. ಕೇಂದ್ರ ಸಂಸ್ಕೃತಿ ಸಚಿವರು ತುಂಬಾ ದೊಡ್ಡವರು. ನಾನು ಅವರ ಸೇವಕಿಯಲ್ಲ. ಕಾರ್ಯಕ್ರಮದಲ್ಲಿ ಭಾಗಿಯಾಗಲಾರೆ ಎಂದರು.
ಇಂದು ಮಧ್ಯಾಹ್ನ ನೇತಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವ ಇಚ್ಚೆ ಇಲ್ಲ ಎಂದವರು ತಿಳಿಸಿದರು.
ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಉದ್ಘಾಟಿಸಲಿದ್ದಾರೆ.