ಬೆಂಗಳೂರು, ಸೆ 07 (DaijiworldNews/SM): ರಾಜ್ಯದಲ್ಲಿ ಭಾರಿ ಮಳೆಯ ಪರಿಣಾಮ ಉಂಟಾಗಿರುವ ಹಾನಿಯ ಬಗ್ಗೆ ಕೇಂದ್ರ ಅಧ್ಯಯನ ತಂಡದೊಂದಿಗೆ ಇಂದು ಸುದೀರ್ಘವಾಗಿ ಚರ್ಚೆ ಮಾಡಲಾಗಿದ್ದು ರಾಜ್ಯದ ಪರಿಸ್ಥಿತಿ ವಿವರಿಸಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಳೆದ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಂದಿರುವ ಮಳೆಯ ಬಗ್ಗೆ ವಿವರಗಳನ್ನು ನೀಡಲಾಗಿದೆ. ದಕ್ಷಿಣ ಹಾಗೂ ಉತ್ತರ ಒಳನಾಡು, ಕರಾವಳಿ, ಬೆಂಗಳೂರಿನಲ್ಲಿ ಪ್ರವಾಹ ಉಂಟಾಗಿದೆ ಎಂಬ ವಿವರಗಳನ್ನು ನೀಡಲಾಗಿದೆ. ಬೆಳೆ ಮತ್ತು ಮನೆಗಳಿಗೆ ಆಗಿರುವ ಹಾನಿ, ಮೂಲಸೌಕರ್ಯಕ್ಕೆ ಆಗಿರುವ ಹಾನಿ, ಜನಜಾನುವಾರುಗಳಿಗೆ ಆಗಿರುವ ಪ್ರಾಣಹಾನಿ ಕುರಿತ ವಿವರಗಳನ್ನು ನೀಡಿದೆ. ಅವರು ನಾಲ್ಕು ತಂಡಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, ಅವರು ಭೇಟಿ ನೀಡಿ ಬಂದ ನಂತರ ಮತ್ತೊಂದು ಸಭೆ ನಡೆಸಿ ಅಂತಿಮವಾದ ಮನವಿಯನ್ನು ನೀಡಲಾಗುವುದು. ಕಳೆದ ವಾರವೇ ಒಂದು ಮನವಿ ಕಳುಹಿಸಲಾಗಿತ್ತು. ಈಗ ಅಪ್ ಡೇಟ್ ಮಾಡಿ ಮತ್ತೊಮ್ಮೆ ವಿಸ್ತೃತ ಮನವಿ ನೀಡಲಾಗುವುದು ಎಂದರು.
ಬೆಂಗಳೂರಿನ ಜನರಿಗೆ ಆಗಿರುವ ಸಮಸ್ಯೆ, ಕೆರೆಗಳು ತುಂಬಿ, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿರುವುದು, ನಷ್ಟದ ಪ್ರಾಥಮಿಕ ಅಂದಾಜು ಮಾಡಿರುವುದು ತಿಳಿಸಲಾಗಿದೆ. ಮೀನುಗಾರರ ಹಡಗುಗಳಿಗೆ ಹಾನಿಯಾಗಿರುವುದು, ಭೂ ಕುಸಿತವಾಗಿರುವ ಪ್ರಮುಖ ಅಂಶಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದರು.