ನವದೆಹಲಿ, ಸೆ 07 (DaijiworldNews/DB): ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದರ ವಿರುದ್ಧದ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರವೂ ಮುಂದುವರಿಸಲಿದೆ. ಇಂದು ವಾದ-ಪ್ರತಿವಾದ ಬಗ್ಗೆ ವಿಸ್ತೃತ ವಿಚಾರಣೆ ನಡೆಸಿದ ಸುಪ್ರೀಂ ನಾಳೆಗೆ ವಿಚಾರಣೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ಭಾರತವು ಸಕಾರಾತ್ಮಕ ಜಾತ್ಯಾತೀತತೆಯನ್ನು ಪಾಲಿಸುತ್ತಿದೆ. ಹೀಗಾಗಿ ಸಮವಸ್ತ್ರದ ಜೊತೆಗೆ ಶಿರವಸ್ತ್ರ ಧರಿಸುವುದಕ್ಕೆ ಅರ್ಜಿದಾರರಿಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಸಮವಸ್ತ್ರದ ಸೂಚನೆ ವಿರೋಧಿಸುವುದು ನನ್ನ ಉದ್ದೇಶವಲ್ಲ. ಆದರೆ ಸಂವಿಧಾನದ 19ನೇ ವಿಧಿಯಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಉಡುಪು ಧರಿಸುವುದಕ್ಕೂ ಸಂಬಂಧಿಸಿದೆ. ಆದರೆ ಜಿಜಾಬ್ ಧರಿಸಲು ಅನುಮತಿ ನಿರಾಕರಿಸುವ ಸರ್ಕಾರ ಈ ವಿಧಿಯನ್ನು ಉಲ್ಲಂಘಿಸಿದೆ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗುಪ್ತಾ ಅವರು, ಉಡುಪು ಧರಿಸುವ ಹಕ್ಕು, ಉಡುಪು ಕಳಚುವುದನ್ನೂ ಒಳಗೊಳ್ಳುತ್ತದೆಯೇ? ಎಂದು ಪ್ರಶ್ನಿಸಿದರು. ಶಾಲೆಗಳಲ್ಲಿ ಯಾರೂ ಉಡುಪನ್ನು ಕಳಚುವುದಿಲ್ಲ. ಹೆಚ್ಚುವರಿ ಉಡುಪು ತೊಡುವುದರ ಬಗ್ಗೆ 19ನೇ ವಿಧಿ ಹೇಳುವುದನ್ನು ನಿರ್ಬಂಧಿಸುವುದು ಸರಿಯೇ? ಸಮವಸ್ತ್ರ ಬಣ್ಣದ ಶಿರವಸ್ತ್ರ ಧರಿಸುವಿಕೆಯಿಂದ ಯಾರ ನೈತಿಕತೆ ಮೇಲೆ ಹಾನಿಯುಂಟಾಗುತ್ತದೆ? ಎಂದು ಮರು ಪ್ರಶ್ನೆ ಹಾಕಿದರು. ಅಷ್ಟಕ್ಕೂ ಬುರ್ಖಾ ಅಥವಾ ಜಿಲ್ಬಾಬ್ನ್ನು ವಿದ್ಯಾರ್ಥಿಗಳು ಧರಿಸುವುದಿಲ್ಲ. ಅವರು ಹಿಜಾಬ್ ಧರಿಸಲು ಮಾತ್ರ ಅನುಮತಿ ಕೇಳಿರುವುದು ಎಂದರು.
ಹಿಜಾಬ್ ಸಂವಿಧಾನದ 25ನೇ ವಿಧಿಯ ಭಾಗ ಅಲ್ಲ ಎಂಬುದಾಗಿ ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ. ಆದರೆ ಇದು ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಆದೇಶ ನೀಡಿದಂತಿದೆ ಎಂದು ಕಾಮತ್ ಆಪಾದನೆ ಮಾಡಿದರು. ಇದಕ್ಕೆ ಉತ್ತರಿಸಿದ ನ್ಯಾ. ಗುಪ್ತಾ ಅವರು, ರಾಜ್ಯ ಸರ್ಕಾರದ ಆದೇಶವನ್ನು ನೀವು ಸರಿಯಾಗಿ ಓದಿದಂತಿಲ್ಲ. ಕೇವಲ ಒಂದು ಸಮುದಾಯ ಮಾತ್ರ ಧಾರ್ಮಿಕ ಉಡುಪು ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಬರಲು ಬಯಸಿದೆ ಎಂದರು.
ಇತರ ಧರ್ಮಗಳ ವಿದ್ಯಾರ್ಥಿಗಳೂ ಧಾರ್ಮಿಕ ಸಂಕೇತಗಳನ್ನು ಧರಿಸುತ್ತಾರೆ. ರುದ್ರಾಕ್ಷಿ, ಶಿಲುಬೆ, ನಾಮಗಳನ್ನು ಧರಿಸಿ ಬರುತ್ತಾರೆ. ಬಿಂದಿ, ಮೂಗುತಿಗಳನ್ನೂ ಧರಿಸುತ್ತಾರೆ. ದಕ್ಷಿಣ ಆಫ್ರಿಕಾದ ಕೋರ್ಟ್ ಹಿಂದೂ ಹುಡುಗಿಗೆ ಶಾಲೆಗೆ ಮೂಗುತಿ ಧರಿಸಿ ಬರಲು ಇತ್ತೀಚೆಗೆ ಅನುಮತಿ ನೀಡಿದೆ ಎಂದು ಕಾಮತ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಗುಪ್ತಾ, ರುದ್ರಾಕ್ಷಿ, ಶಿಲುಬೆ ಮುಂತಾದವುಗಳನ್ನು ಧಿರಿಸಿನ ಒಳಗೆ ಧರಿಸುತ್ತಾರೆ. ಅದು ಇತರರಿಗೆ ಕಾಣದಿರುವುದರಿಂದ ಶಿಸ್ತು ಉಲ್ಲಂಘನೆಯಾಗುವುದಿಲ್ಲ. ಅದೇ ರೀತಿ ಬಿಂದಿ, ಮೂಗುತಿ ಎಂದಿಗೂ ಧಾರ್ಮಿಕವಲ್ಲ. ಜಗತ್ತಿನ ಎಲ್ಲಾ ಮಹಿಳೆಯರು ಮೂಗುತಿ ಧರಿಸುತ್ತಾರೆ. ಅಲ್ಲದೆ, ಅದು ಸಂಪ್ರದಾಯವೂ ಅಲ್ಲ. ಹಿಂದು ಹುಡುಗಿಯರು ಧರಿಸುವ ಮಂಗಳಸೂತ್ರ ಧಾರ್ಮಿಕ ಎಂದರು.
ವಿಚಾರಣೆ ವೇಳೆ ಸಾಕಷ್ಟು ವಾದ-ಪ್ರತಿವಾದ ನಡೆದಿದ್ದು, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು.