ನವದೆಹಲಿ, ಸೆ 07 (DaijiworldNews/DB): ದೇಶದ ಶೇ .80ರಷ್ಟು ಸರ್ಕಾರಿ ಶಾಲೆಗಳು ಕಸದ ತೊಟ್ಟಿಗಳಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿವೆ. ಸ್ಮಾರ್ಟ್ ಕ್ಲಾಸ್ ಘೋಷಣೆಯನುಸಾರ ಸುಧಾರಣೆ ಕೈಗೊಂಡರೆ ಶತ ವರ್ಷವೇ ಬೇಕಾಗಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪಿಎಂ-ಶ್ರೀ ಯೋಜನೆಯಡಿ ದೇಶದ 14,500 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಬಗ್ಗೆ ಸುದೀರ್ಘ ಪತ್ರದ ಮೂಲಕ ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ಹತ್ತು ಲಕ್ಷ ಸರ್ಕಾರಿ ಶಾಲೆಗಳಿವೆ. ಇವೆಲ್ಲದರ ಸುಧಾರಣೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ 10 ಲಕ್ಷ ಸರ್ಕಾರಿ ಶಾಲೆಗಳಿವೆ. ಪ್ರಸ್ತುತ ಶಾಲೆಗೆ ಹೋಗುತ್ತಿರುವ 27 ಕೋಟಿ ವಿದ್ಯಾರ್ಥಿಗಳ ಪೈಕಿ 18 ಕೋಟಿ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿ ಮಾತ್ರ ತುಂಬಾ ಶೋಚನೀಯವಾಗಿದೆ ಎಂದಿದ್ದಾರೆ.
ಕುಡಿಯುವ ನೀರಿನ ವ್ಯವಸ್ಥೆ, ಸರಿಯಾದ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳೇ ಸರ್ಕಾರಿ ಶಾಲಾ ಮಕ್ಕಳಿಗೆ ಒದಗುತ್ತಿಲ್ಲ. ಇನ್ನು ಯೋಜನೆಯಡಿ ಹತ್ತು ಲಕ್ಷ ಶಾಲೆಗಳನ್ನು ಅಭಿವೃದ್ದಿಪಡಿಸುವುದು ಉತ್ತಮವೇ. ಇಲ್ಲವಾದರೆ ಮುಂದಿನ ನೂರು ವರ್ಷ ಕಾಲವೂ ಸರ್ಕಾರಿ ಶಾಲೆಗಳ ಸುಧಾರಣೆ ಅಸಾಧ್ಯ. ಆದರೆ ಎಂದವರು ಪ್ರತಿಪಾದಿಸಿದ್ದಾರೆ.