ದಿಸ್ಪುರ್, ಸೆ 07 (DaijiworldNews/DB): ಪಾಕಿಸ್ತಾನ, ಬಾಂಗ್ಲಾದೇಶವನ್ನು ಜೋಡಿಸಿ ಮತ್ತು ಅಖಂಡ ಭಾರತಕ್ಕಾಗಿ ಕಾರ್ಯೋನ್ಮುಕರಾಗಿ. ಭಾರತ್ ಜೋಡೋ ಯಾತ್ರೆಯಿಂದ ಏನೂ ಉಪಯೋಗವಾಗದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯ ಕುರಿತು ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 1947ರಲ್ಲಿ ಭಾರತವನ್ನು ಕಾಂಗ್ರೆಸ್ ಒಡೆಯಿತು. ತಾತ ತಪ್ಪು ಮಾಡಿದ್ದಾರೆ ಎಂದು ಸದ್ಯ ರಾಹುಲ್ ಗಾಂಧಿ ಬೇಸರಿಸುತ್ತಿದ್ದಾರೆ. ಅವರು ಭಾರತ್ ಜೋಡೋ ಯಾತ್ರೆ ಮಾಡುವ ಬದಲು, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಜೋಡಿಸಲು ಪ್ರಯತ್ನಿಸಲಿ ಎಂದರು.
ಅಸ್ಸಾಂನಲ್ಲಿ ನೆಲಸಮಗೊಳಿಸಿದ ಎಲ್ಲಾ ಮದರಸಗಳು ಮದರಸಗಳಾಗಿರಲಿಲ್ಲ, ಅವು ಅಲ್ಖೈದಾ ಕಚೇರಿಗಳಾಗಿದ್ದವು. ಸುಮಾರು ಎರಡ್ಮೂರು ಮದರಸಾಗಳನ್ನು ನೆಲಸಮಗೊಳಿಸಲಾಗಿದೆ. ಅಲ್ಖೈದಾದ ಕಾರ್ಯಚಟುವಟಿಕೆಗಳಿಗೆ ಬಳಕೆಯಾಗುವ ಮದರಸಗಳು ಬೇಡವೆಂದು ಮುಸ್ಲಿಂ ಸಮುದಾಯದವರೇ ಕೆಡವಲು ಮುಂದಾಗುತ್ತಿದ್ದಾರೆ ಎಂದವರು ತಿಳಿಸಿದರು.
ಇನ್ನು ಪಾಕಿಸ್ತಾನದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುವಂತೆ ಹೇಳಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಹಿಮಂತ ಬಿಸ್ವಾ ಶರ್ಮಾ ಅವರು ಬಾಲಿಶ, ಅಪಕ್ವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಹೊಸ ಯಜಮಾನರಿಗೆ ನಿಷ್ಠೆ ತೋರಿಸುವುದಷ್ಟೇ ಅವರ ಉದ್ದೇಶ. ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.