ಬೆಂಗಳೂರು, ಸೆ 07 (DaijiworldNews/DB): ಶಾಲಾರಂಭಕ್ಕೆ ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿಯೇ ಶಾಲೆಗಳಿಗೆ ಆಗಮಿಸಬೇಕೆಂದು ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಇದರೊಂದಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಹಾಕುವಂತೆ ನಿರ್ದೇಶಿಸಿದೆ.
ಶಿಕ್ಷಕರು ಶಾಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಚಾರಗಳಲ್ಲಿ ಅಶಿಸ್ತು ತೋರುವುದರಿಂದ ಮಕ್ಕಳ ಕಲಿಕಾ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಇದರಲ್ಲಿ ಶಾಲೆಗೆ ತಡವಾಗಿ ಆಗಮಿಸುವುದೂ ಸೇರಿದೆ. ಹೀಗಾಗಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಕಚೇರಿ ಸಿಬಂದಿಗಳು ನಿಗದಿತ ಅವಧಿಗಿಂತ ಮುಂಚೆಯೇ ಶಾಲೆಯಲ್ಲಿ ಹಾಜರಿರಬೇಕು. ಆ ಮೂಲಕ ಪಾಠದ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. 15 ನಿಮಿಷ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗುವುದು ಇನ್ನು ಮುಂದೆ ಕಡ್ಡಾಯವಾಗಲಿದೆ ಎಂದು ತಿಳಿಸಿದೆ.
ರಜೆ ಮೇಲೆ ತೆರಳುವವರು ಮೇಲಧಿಕಾರಿಗಳಿಂದ ಪೂರ್ವಾನುಮತಿ ಮಂಜೂರು ಪಡೆಯುವುದು ಅಗತ್ಯ. ವೇತನ ಬಟವಾಡೆ ಅಧಿಕಾರಿಗಳು ತಮ್ಮ ಅಧೀನ ಕಚೇರಿ ಮತ್ತು ಶಾಲೆಗಳ ಬಯೋಮೆಟ್ರಿಕ್ ಹಾಜರಾತಿಯ ಚೆಕ್-ಇನ್ ಮತ್ತು ಚೆಕ್-ಔಟ್ ಹಾರ್ಡ್/ಸಾಫ್ಟ್ ದಾಖಲೆಗಳನ್ನು ಪ್ರತಿ ತಿಂಗಳು 25ನೇ ತಾರೀಖೀನೊಳಗೆ ಪಡೆದು ಪರಿಶೀಲಿಸಬೇಕು. ಈ ಪರಿಶೀಲನೆ ಆಧಾರದಲ್ಲಿಯೇ ವೇತನ ಪಾವತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಬಯೋಮೆಟ್ರಿಕ್ ಹಾಜರಾತಿಯ ಕಾರ್ಯನಿರ್ವಹಣೆ ಬಗ್ಗೆ ಶಾಲೆಯ ಮುಖ್ಯಸ್ಥರು ಮತ್ತು ಸ್ಥಳೀಯ ಅಧಿಕಾರಿಗಳು ಪರಿಶೀಲಿಸಬೇಕು. ಅಲ್ಲದೆ ಈ ಬಗ್ಗೆ ಜಿಲ್ಲಾ ಉಪ ನಿರ್ದೇಶಕರು ಮಾಸಿಕ ಸಭೆಗಳಲ್ಲಿ ಮಾಹಿತಿ ಪಡೆದುಕೊಳ್ಳಬೇಕು. ಸಮಯಪಾಲನೆಯಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ದ ಗಂಭೀರವಾಗಿ ಪರಿಗಣಿಸಿ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ನಿರ್ದೇಶಿಸಿದೆ.
ಮಂಡ್ಯ ಜಿಲ್ಲೆಯ ನೆಲ್ಲಿಗೆರೆ ಶಾಲೆಗೆ ಆಗಸ್ಟ್ 12ರಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಭೇಟಿ ನೀಡಿದ್ದ ವೇಳೆ ಶಿಕ್ಷಕರಿಗಾಗಿ ಮಕ್ಕಳು ಕಾಯುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಶಿಕ್ಷಕರು ಅರ್ಧ ಗಂಟೆ ತಡವಾಗಿ ಹಾಜರಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಆಯುಕ್ತ ಡಾ. ಆರ್. ವಿಶಾಲ್ ಸುತ್ತೋಲೆ ಹೊರಡಿಸಿದ್ದಾರೆ.