ಮಧ್ಯಪ್ರದೇಶ, ಸೆ 07 (DaijiworldNews/DB): ಸಮೋಸಾ ಅಂಗಡಿಯಲ್ಲಿ ಸ್ನ್ಯಾಕ್ಸ್ ಬೌಲ್ ಮತ್ತು ಚಮಚ ನೀಡದಿದ್ದದಕ್ಕೆ ವ್ಯಕ್ತಿಯೊಬ್ಬ ಮಧ್ಯಪ್ರದೇಶ ಮುಖ್ಯಮಂತ್ರಿಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರಿತ್ತ ಪ್ರಸಂಗ ನಡೆದಿದೆ.
ವಂಶ್ ಬಹದ್ದೂರ್ ಎಂಬಾತ ದೂರು ನೀಡಿದವ. ಈತ ಸಮೋಸಾ ತಿನ್ನಲೆಂದು ರಾಕೇಶ್ ಸಮೋಸಾ ಶಾಪ್ಗೆ ತೆರಳಿದ್ದ. ಸಮೋಸಾ ನೀಡುವಾಗ ಅಂಗಡಿಯಾತ ವಂಶ್ಗೆ ಬೌಲ್ ಮತ್ತು ಚಮಚ ನೀಡಲಿಲ್ಲ. ಚಮಚ ಮತ್ತು ಬೌಲ್ ನೀಡುವಂತೆ ಕೇಳಿದಾಗ ಅಂಗಡಿಯಾತ ಇಲ್ಲ ಎಂದಿದ್ದಾನೆ. ಇದರಿಂದ ಕುಪಿತನಾದ ವಂಶ್ ಸಿಎಂ ಸಹಾಯವಾಣಿಗೆ ಕರೆ ಮಾಡಿ ಅಂಗಡಿಯಾತನ ವಿರುದ್ದ ದೂರು ನೀಡಿದ್ದಾನೆ.
ಛತ್ತರ್ಪುರ ಬಸ್ ನಿಲ್ದಾಣದ ಬಳಿ ಇರುವ ರಾಕೇಶ್ ಸಮೋಸಾ ಅಂಗಡಿಯಲ್ಲಿ ಸಮೋಸಾ ನೀಡುವಾಗ ಬೌಲ್ ಮತ್ತು ಚಮಚ ನೀಡಿಲ್ಲ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಎಂದು ಕರೆ ಸ್ವೀಕರಿಸಿದ ಸಿಬಂದಿಗೆ ಹೇಳಿದ್ದಾನೆ. ಆರಂಭದಲ್ಲಿ ಸಹಾಯವಾಣಿಯಲ್ಲಿ ದೂರು ಸ್ವೀಕರಿಸಲಾಯಿತಾದರೂ, ಬಳಿಕ ಅದು ಗಂಭೀರ ವಿಷಯವಲ್ಲದ ಕಾರಣ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.