ವಾರಂಗಲ್ (ತೆಲಂಗಾಣ), ಸೆ 07 (DaijiworldNews/DB): ಶಸ್ತ್ರಚಿಕಿತ್ಸೆಗೆ ಅನಸ್ತೇಶಿಯಾ ನೀಡುವ ವೇಳೆ ಎಂಟು ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ವಾರಂಗಲ್ನ ಎಂಜಿಎಂ ಆಸ್ಪತ್ರೆಯಲ್ಲಿ ನಡೆದಿದೆ.
ಸೆ.4ರಂದು ಸಂಭವಿಸಿದ ಅಪಘಾತದಲ್ಲಿ ವಾರಂಗಲ್ ಜಿಲ್ಲೆಯ ಲಿಂಗಯ್ಯ ತಾಂಡಾದ ಭೂಕ್ಯ ಶಿವ ಮತ್ತು ಲಲಿತಾ ದಂಪತಿಯ ಪುತ್ರ ನಿಹಾನ್ನ ಬಲಗೈ ಮುರಿತಕ್ಕೊಳಗಾಗಿತ್ತು. ಹೀಗಾಗಿ ಬಾಲಕನನ್ನು ಎಂಜಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಂಗಳವಾರ ಆತನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲೆಂದು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆಗೂ ಮುನ್ನ ಅನಸ್ತೇಶಿಯಾ ನೀಡುವ ವೇಳೆ ಬಾಲಕನಿಗೆ ಹೃದಯಾಘಾತವಾಗಿದೆ. ಕೂಡಲೇ ಆತನನ್ನು ಆರ್ಐಸಿಯು ವಾರ್ಡ್ಗೆ ಸ್ಥಳಾಂತರಿಸಿ ಕೃತಕ ಉಸಿರಾಟ ಯಂತ್ರದ ಮೂಲಕ ಉಳಿಸಲು ಯತ್ನಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಮಧ್ಯಾಹ್ನ ವೇಳೆಗೆ ಬಾಲಕ ಸಾವನ್ನಪ್ಪಿದ್ದಾನೆ.
ಬಾಲಕ ಮೃತಪಟ್ಟು ಮೂರು ಗಂಟೆ ಕಳೆದರೂ ವೈದ್ಯರು ಮಾಹಿತಿ ನೀಡಿಲ್ಲವೆಂದು ಪೋಷಕರು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ವೈದ್ಯರ ಮೇಲೆ ಹಲ್ಲೆಗೂ ಯತ್ನಿಸಿದ್ದರೆಂದು ತಿಳಿದು ಬಂದಿದೆ. ಸಾವಿನ ಕುರಿತು ತನಿಖೆಗಾಗಿ ಹಿರಿಯ ವೈದ್ಯರನ್ನೊಳಗೊಂಡ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ಚಂದ್ರಶೇಖರ್ ತಿಳಿಸಿದ್ದಾರೆ. ಇನ್ನು ಘಟನೆಯ ಕುರಿತು ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ರಮೇಶ್ ರೆಡ್ಡಿ ಎಂಜಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.