ನವದೆಹಲಿ, ಸೆ 07 (DaijiworldNews/HR): ನಿಜವಾದ ಶಿವಸೇನಾದ ಹಕ್ಕುದಾರರು ಯಾರೆಂಬ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸಬಹುದೇ ಎಂಬುದರ ಕುರಿತು ಸೆಪ್ಟೆಂಬರ್ 27ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ತಮ್ಮ ಬಣವನ್ನೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಉದ್ಧವ್ ಠಾಕ್ರೆ ಬಣ ಕೋರ್ಟ್ ಮೆಟ್ಟಿಲೇರಿತ್ತು.
ಇನ್ನು ಏಕನಾಥ ಶಿಂದೆ ಬಣ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಆಗಸ್ಟ್ 4ರಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಶಿಂದೆ ಬಣದ ಅರ್ಜಿಯ ಕುರಿತ ನೋಟಿಸ್ಗೆ ಉತ್ತರಿಸಲು ಉದ್ಧವ್ ಠಾಕ್ರೆ ನೇತೃತ್ವದ ಬಣ ಸಮಯ ಕೋರಿದ್ದು, ಆ ಮನವಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.