ಗಾಜಿಯಾಬಾದ್, ಸೆ 07 (DaijiworldNews/DB): ಲಿಫ್ಟ್ನಲ್ಲಿ ಸಾಕು ನಾಯಿಯೊಂದು ಮಗುವಿಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿ ಮಾಲಕರಿಗೆ ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 5,000 ರೂ. ದಂಡ ವಿಧಿಸಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಸಾಕುನಾಯಿಯನ್ನು ಹೌಸಿಂಗ್ ಸೊಸೈಟಿ ಲಿಫ್ಟ್ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಲಿಫ್ಟ್ನಲ್ಲಿದ್ದ ಮಗುವಿಗೆ ನಾಯಿ ಕಚ್ಚಿದೆ. ನಾಯಿ ಕಚ್ಚಿದ್ದರಿಂದ ನೋವಿನಲ್ಲಿ ಮಗು ನರಳಾಡುತ್ತಿದ್ದರೂ, ನಾಯಿಯ ಮಾಲಕಿ ಆ ಮಗುವಿನ ಬಗ್ಗೆ ಕಾಳಜಿ ತೋರಿಸಿರಲಿಲ್ಲ. ಘಟನೆ ಸಂಬಂಧ ಮಗುವಿನ ತಂದೆ ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಲ್ ಅಧಿಕಾರಿ ಅಲೋಕ್ ದುಬೆ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಲ್ಲದೆ, ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಾಯಿಯ ಮಾಲಕಿ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಹಿಳೆಯ ಮನೆಗೆ ಭೇಟಿ ನೀಡಿದಾಗ ಸಾಕು ನಾಯಿ ನೋಂದಣಿಯಾಗದಿರುವುದೂ ತಿಳಿದು ಬಂದಿದೆ. ಹೀಗಾಗಿ ಇದೀಗ ಮಹಿಳೆಗೆ ದಂಡ ವಿಧಿಸಲಾಗಿದೆ.
ಸಿಸಿಟಿವಿ ವೀಡಿಯೋದಲ್ಲೇನಿದೆ?
ಸೆಪ್ಟೆಂಬರ್ 5 ರಂದು ಸಂಜೆ 6 ಗಂಟೆಗೆ ಮಹಿಳೆ ತನ್ನ ಸಾಕುನಾಯಿಯೊಂದಿಗೆ ಲಿಫ್ಟ್ ಏರುತ್ತಾಳೆ. ಅದೇ ಲಿಫ್ಟ್ನಲ್ಲಿ ಪುಟ್ಟ ಬಾಲಕನೂ ಇರುತ್ತಾನೆ. ಲಿಫ್ಟ್ ಏರಿದ ನಾಯಿಯು ಬಾಲಕನನ್ನು ಹಾರಿ ಹಾರಿ ಕಚ್ಚತೊಡಗುತ್ತದೆ. ಆದರೆ ಮಗುವನ್ನು ನಾಯಿಯಿಂದ ರಕ್ಷಿಸುವ ಕೆಲಸವನ್ನು ನಾಯಿಯ ಮಾಲಕಿ ಮಾಡುವುದಿಲ್ಲ. ಮಗುವಿಗೆ ಗಾಯವಾಗಿದೆಯೇ ಎಂದು ತಿಳಿದುಕೊಳ್ಳುವ ಗೋಜಿಗೂ ಹೋಗುವುದಿಲ್ಲ.