ನವದೆಹಲಿ, ಸೆ 07 (DaijiworldNews/MS): ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡುವ ಮುನ್ನ ಬುಧವಾರ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆಯ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ದ್ವೇಷದ ರಾಜಕಾರಣದಿಂದ ತಂದೆಯನ್ನು ಕಳೆದುಕೊಂಡಿದ್ದೇನೆ, ಆದರೆ ದೇಶವನ್ನು ಕಳೆದುಕೊಳ್ಳುವುದಿಲ್ಲ" ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಇಂದು ಬೆಳಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ತಮಿಳು ನಾಡಿನ ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸುವುದಕ್ಕೆ ಮುನ್ನ ಶ್ರೀಪೆರಂಬದೂರಿನಲ್ಲಿರುವ ರಾಜೀವ್ ಗಾಂಧಿ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿ ಟ್ವೀಟ್ ಮಾಡಿರುವ ಅವರು, ನಾನು ನನ್ನ ತಂದೆಯನ್ನು ರಾಜಕೀಯ ದ್ವೇಷ ಮತ್ತು ವಿಭಜನೆಗಾಗಿ ಕಳೆದುಕೊಂಡೆ. ಹಾಗೆಂದು ನನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳಲು ಸಿದ್ಧನಿಲ್ಲ. ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ. ಆಶಾವಾದ ಭಯವನ್ನು ಸೋಲಿಸುತ್ತದೆ. ನಾವೆಲ್ಲರೂ ಒಟ್ಟಾಗಿ ಜಯಸೋಣ, ಎಲ್ಲ ಸಮಸ್ಯೆಗಳಿಂದ ಹೊರಬರೋಣ ಎಂದು ತಮ್ಮ ತಂದೆಗೆ ನಮನ ಸಲ್ಲಿಸಿದ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ಮೇ 21, 1991 ರಂದು ಶ್ರೀಪೆರಂಬದೂರಿನಲ್ಲಿ ಹತ್ಯೆಗೀಡಾದ ತಮ್ಮ ತಂದೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಬಳಿಕ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲು ಕನ್ಯಾಕುಮಾರಿಗೆ ರಾಹುಲ್ ಆಗಮಿಸಿದ್ದಾರೆ. ಮಹಾತ್ಮ ಗಾಂಧಿ ಮಂಟಪದಲ್ಲಿ ಪ್ರಾರ್ಥನಾ ಸಭೆ ಮತ್ತು ಗಾಂಧಿ ಮಂಟಪದಲ್ಲಿ ರಾಷ್ಟ್ರಧ್ವಜ ಹಸ್ತಾಂತರ ಸಮಾರಂಭ ನಡೆಯಲಿದ್ದು, ಬಳಿಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರಿಗಳೊಂದಿಗೆ ಮೆರವಣಿಗೆ ನಡೆಸಲಿದ್ದಾರೆ.