ನವದೆಹಲಿ, ಸೆ 07 (DaijiworldNews/DB): ದೆಹಲಿಯಲ್ಲಿ ಅಧಿಕ ಮೊತ್ತದ ತೆರಿಗೆ ಹಣವನ್ನು ದುಂದುವೆಚ್ಚ ಮಾಡಿ ವ್ಯರ್ಥ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.
ಪಂಜಾಬ್ನಲ್ಲಿ ಸರ್ಕಾರಿ ನೌಕರರಿಗೆ ಆಗಸ್ಟ್ ತಿಂಗಳ ಸಂಬಳ ನೀಡಿಲ್ಲ ಎಂಬ ಮಾಧ್ಯಮ ವರದಿ ಉಲ್ಲೇಖಿಸಿ ಪಂಜಾಬ್ ಮತ್ತು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಭಾರತವನ್ನು ವಿಶ್ವದ ನಂ.1 ರಾಷ್ಟ್ರ ಮಾಡಲು ಹೊರಟಿರುವ ಕೇಜ್ರೀವಾಲ್ ಪಂಜಾಬ್ನಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ದೇಶದ ರಾಜದಾನಿ. ಅಲ್ಲಿನ ಸರಾಸರಿ ಆದಾಯವು ದೇಶದ ಆದಾಯಕ್ಕಿಂತಲೂ ಮೂರು ಪಟ್ಟು ಜಾಸ್ತಿ ಇರುತ್ತದೆ. ಆದರೆ ಅಂತಹ ಆದಾಯವನ್ನು ಅಲ್ಲಿ ದುಂದು ವೆಚ್ಚ ಮಾಡಲಾಗುತ್ತಿದೆ. ಅಧಿಕ ಮೊತ್ತದ ತೆರಿಗೆ ಹಣವನ್ನು ದುಂದುವೆಚ್ಚ ಮಾಡಿ ನಷ್ಟ ಮಾಡಿದ್ದಾರೆ ಎಂದು ಆಪಾದಿಸಿದರು.
ಪಂಜಾಬ್ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೇರಿ ಒಂದು ವರ್ಷವೂ ಪೂರೈಸಿಲ್ಲ. ಆಗಲೇ ಹಣಕಾಸು ಕೊರತೆ ಆ ಸರ್ಕಾರಕ್ಕೆ ಎದುರಾಗಿದೆ. ನೌಕರರಿಗೆ ಆಗಸ್ಟ್ ತಿಂಗಳ ಸಂಬಳವನ್ನೇ ಅಲ್ಲಿನ ಸರ್ಕಾರ ನೀಡದಿರುವುದು ಇದನ್ನು ಸ್ಪಷ್ಟಪಡಿಸುತ್ತದೆ. ದೇಶವನ್ನು ನಂಬರ್ ವನ್ ಮಾಡಲು ಹೊರಟಿರುವ ಕೇಜ್ರೀವಾಲ್ ಪಂಜಾಬ್ನಲ್ಲಿ ಸರ್ಕಾರ ರಚನೆಯಾದಂದಿನಿಂದ ಇಲ್ಲಿವರೆಗೆ ಮಾಡಿದ್ದೇನು ಎಂದು ಪ್ರಶ್ನಿಸಿದರು.