ನವದೆಹಲಿ, ಸೆ 07 (DaijiworldNews/DB): ರಷ್ಯಾ ಮತ್ತು ಉಕ್ರೇನ್ ಯುದ್ದದಿಂದಾಗಿ ಭಾರತಕ್ಕೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇತರ ದೇಶಗಳ ವೈದ್ಯಕೀಯ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಅನುಮತಿ ನೀಡಿ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ಆದೇಶ ಹೊರಡಿಸಿದೆ.
ನಿಯಮ ಪ್ರಕಾರ ವೈದ್ಯಕೀಯ ವ್ಯಾಸಂಗವನ್ನು ವಿದೇಶಗಳಲ್ಲಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳ್ಳದೆ ಇತರ ರಾಜ್ಯಗಳಿಗೆ, ವಿದೇಶಗಳಿಗೆ ತೆರಳಿ ಕೋರ್ಸ್ ಮುಂದುವರಿಸಲು ಅನುಮತಿಯಿಲ್ಲ. ಅಲ್ಲದೆ ಸಂಪೂರ್ಣ ಕೋರ್ಸ್, ಇಂಟರ್ನ್ಶಿಪ್, ತರಬೇತಿ, ಕ್ಲರ್ಕ್ಶಿಪ್ನ್ನು ಅದೇ ಸಂಸ್ಥೆಯಲ್ಲಿ ಪೂರ್ಣಗೊಳಿಸಬೇಕು. ಆದರೆ ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿಗಳಿಗೆ ಅಲ್ಲಿನ ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿ ಎನ್ಎಂಸಿಯು ನಿಯಮದಲ್ಲಿ ಬದಲಾವಣೆ ಮಾಡಿದೆ. ಅದರಂತೆ ಉಕ್ರೇನ್ನಿಂದ ವಾಪಸಾದ ವೈದ್ಯ ವಿದ್ಯಾರ್ಥಿಗಳಿಗೆ ತಮ್ಮ ವೈದ್ಯ ಕೋರ್ಸ್ ಪೂರ್ಣಗೊಳಿಸಲು ಇತರ ದೇಶಗಳ ವೈದ್ಯಕೀಯ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಅನುಮತಿ ನೀಡಿದೆ. ಪದವಿಯನ್ನು ಪೋಷಕ ಉಕ್ರೇನ್ ವಿಶ್ವವಿದ್ಯಾನಿಲಯವೇ ನೀಡಲಿದೆ ಎಂದು ಎನ್ಎಂಸಿ ತಿಳಿಸಿದೆ.
ಸದ್ಯ ಯುದ್ದದ ನಡುವೆಯೂ ಉಕ್ರೇನ್ನಲ್ಲಿ ವಿವಿಗಳು ಕಾರ್ಯಾರಂಭ ಮಾಡಿವೆ. ಆದರೆ ಅಲ್ಲಿನ ಭೌಗೋಳಿಕ, ರಾಜಕೀಯ ಪರಿಸ್ಥಿತಿಗಳು ಸುಗಮವಾಗಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಅಲ್ಲಿಗೆ ಹಾಜರಾಗುವುದು ಅಸಾಧ್ಯವಾಗಿದೆ. ಸದ್ಯ ತಾತ್ಕಾಲಿಕವಾಗಿ ಭಾರತೀಯ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಸೀಟು ನೀಡಬೇಕೆಂದು ಉಕ್ರೇನ್ನಿಂದ ವಾಪಸಾದ ವಿದ್ಯಾರ್ಥಿಗಳ ಒತ್ತಾಯವಾಗಿದೆ. ಆದರೆ ಇದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಅಥವಾ ಎನ್ಎಂಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.