ಬೆಂಗಳೂರು, ಸೆ 07 (DaijiworldNews/MS): ದೊಡ್ಡಬಳ್ಳಾಪುರದಲ್ಲಿ ನಾಳೆ ನಡೆಯಬೇಕಾಗಿದ್ದ ಜನೋತ್ಸವ ಸಮಾವೇಶ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಆಹಾರ ಇಲಾಖೆಯ ಸಚಿವ ಉಮೇಶ್ ಕತ್ತಿ (61) ವಿಧಿವಶ ಹಿನ್ನೆಲೆಯಲ್ಲಿ ಸಮಾವೇಶ ನಡೆಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಸಚಿವರು ವಿಧಿವಶರಾದ ಹಿನ್ನಲೆ ಈಗಾಗಲೇ ಇಂದು ಶೋಕಾಚರಣೆ ಘೋಷಣೆ ಮಾಡಿದೆ. ಇನ್ನೊಂದೆಡೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸರ್ಕಾರದ ಸಾಧನೆಗಳ ಬಗ್ಗೆ ಸಮಾವೇಶದ ಮೂಲಕ ಪ್ರಚಾರ ಪಡಿಸಬೇಕಾದ ಅನಿವಾರ್ಯತೆಯಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಮುಂಬರುವ 2023ರ ವಿಧಾನಸಭಾ ಚುನಾವಣೆಯ ದಿಕ್ಸೂಚಿಯ ಆರಂಭ ಎಂದೇ ಹೇಳಲಾಗುತ್ತಿದೆ.
ಇನ್ನು ಈ ಹಿಂದೆಯೂ ಜನೋತ್ಸವ ಸಮಾವೇಶ ನಿಗದಿಯಾಗಿ ರದ್ದಾಗಿತ್ತು. ಹೀಗಾಗಿ ಜನೋತ್ಸವ ಸಮಾವೇಶ ಮುಂದೂಡುವುದು ಸಿಎಂ ಬೊಮ್ಮಾಯಿ ನಿರ್ಧಾರದ ಮೇಲೆ ನಿಂತಿದೆ. ಒಂದು ವೇಳೆ ಸಮಾವೇಶ ಆಯೋಜಿಸಿದ್ದೇ ಆದರೆ ವಿಪಕ್ಷಗಳ ವಾಗ್ದಾಳಿಗೂ ಸರ್ಕಾರ ಗುರಿಯಾಗುವ ಸಾಧ್ಯತೆಯಿದೆ.