ನವದೆಹಲಿ, ಸೆ 07 (DaijiworldNews/DB): ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಅಭಿವೃದ್ದಿಗೆ ಕತ್ತಿಯವರ ಕೊಡುಗೆ ಸ್ಮರಣೀಯ ಎಂದು ತಿಳಿಸಿದ್ದಾರೆ.
ಉಮೇಶ್ ಕತ್ತಿ ಅವರೊಬ್ಬ ಅನುಭವಿ ನಾಯಕ. ಕರ್ನಾಟಕದ ಅಭಿವೃದ್ದಿಗೆ ಅವರ ಕೊಡುಗೆ ಸ್ಮರಣೀಯ. ಅವರ ನಿಧನ ನೋವು ತಂದಿದೆ. ಇಂತಹ ಸನ್ನಿವೇಶದಲ್ಲಿ ಕತ್ತಿ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಾಂತ್ವನಗಳು. ಓಂ ಶಾಂತಿ ಎಂಬುದಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ನಿವಾಸದಲ್ಲಿ ರಾತ್ರಿ 10 ಗಂಟೆ ವೇಳೆಗೆ ಉಮೇಶ್ ಕತ್ತಿ ಅವರಿಗೆ ಎದೆನೋವು ಕಾಣಿಸಿಕೊಂಡು, ಕುಸಿದು ಬಿದ್ದಿದ್ದರು. ಬಳಿಕ ತತ್ಕ್ಷಣ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ತಡರಾತ್ರಿ ಅವರು ನಿಧನರಾದರು.
ಉಮೇಶ್ ಕತ್ತಿ ನಿಧನದ ಸುದ್ದಿ ಕೇಳಿ ಬೆಂಬಲಿಗರು, ಅಭಿಮಾನಿಗಳು ಮತ್ತು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ನೆಚ್ಚಿನ ನಾಯಕನ ಅಗಲಿಕೆಗೆ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ. ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದತ್ತ ಬೆಂಬಲಿಗರು ಆಗಮಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಅವರ ಹುಟ್ಟೂರಾದ ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.