ಆಲಪ್ಪುಳ, ಸೆ 07 (DaijiworldNews/MS): ಕೇರಳದ ಆಲಪ್ಪುಳ ಜಿಲ್ಲೆಯ ಅರ್ತುಂಕಲ್ ಎಂಬಲ್ಲಿ ಇರುವ ಸೈಂಟ್ ಜಾರ್ಜ್ ಚರ್ಚ್ ಇನ್ಮುಂದೆ ಶವಗಳ ಸಮಾಧಿಗಾಗಿ ಮರದ ಶವಪೆಟ್ಟಿಗೆ ಬದಲು ಹತ್ತಿಯಿಂದ ಸಿದ್ಧಗೊಳಿಸಿದ ಬಟ್ಟೆಯನ್ನು ಬಳಕೆ ಮಾಡಲು ನಿರ್ಧರಿಸಿದೆ.
ಕೊಚ್ಚಿಯ ಲ್ಯಾಟಿನ್ ಆರ್ಚ್ಡಯಾಸಿಸ್ನ ಅಧೀನದಲ್ಲಿ ಬರುವ ಸೈಂಟ್ ಜಾರ್ಜ್ ಚರ್ಚ್ , ಶವಪೆಟ್ಟಿಗೆ ಬಳಕೆಗೆ ವಿದಾಯ ಹೇಳಿ ಈ ತಿಂಗಳ 1ನೇ ತಾರೀಕಿನಿಂದಲೇ ಹೊಸ ವ್ಯವಸ್ಥೆ ಅಳವಡಿಸಿಕೊಂಡಿದೆ.
ಸದ್ಯದ ಪದ್ಧತಿಯಲ್ಲಿ ಮೃತದೇಹಗಳು ಕೊಳೆಯಲು , ಶವಪೆಟ್ಟಿಗೆಗಳು ವಿಘಟನೆಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದ್ದರಿಂದ ಚರ್ಚ್ ಆಡಳಿತ ಮಂಡಳಿ ಮತ್ತು ಅದರ ವ್ಯಾಪ್ತಿಯ 949 ಕುಟುಂಬಗಳ ಜತೆಗೆ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಸದ್ಯದ ವ್ಯವಸ್ಥೆಯಲ್ಲಿ ಶವ ಹೂಳಲೂ ಸ್ಥಳ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚರ್ಚ್ನ ಸಮಿತಿ ತಿಳಿಸಿದೆ.
" ಚರ್ಚ್ ಸಮುದ್ರದ ಸಮೀಪದಲ್ಲಿರುವುದರಿಂದ, ಮಣ್ಣಿನಲ್ಲಿ ಹೆಚ್ಚಿನ ಲವಣಾಂಶಗಳಿವೆ. ಹೀಗಾಗಿ ಶವಗಳು ಕೊಳೆತು, ಮಣ್ಣಿಗೆ ಸೇರ್ಪಡೆಯಾಗಲು ಹೆಚ್ಚಿನ ಸಮಯ ತಗಲುತ್ತದೆ . ಅಲ್ಲದೆ ಕೆಲವು ಕುಟುಂಬಗಳು ಶವಗಳಿಗೆ ಪಾಲಿಥಿನ್ ಬಟ್ಟೆಗಳನ್ನು ಧರಿಸಿ ಹೂಳುವ ಕಾರಣ ವರ್ಷಗಳಾದರೂ ಶವ ಕೊಳೆಯದೆ ಹಾಗೇ ಉಳಿದು ಸಮಸ್ಯೆಯಾಗುತ್ತಿದೆ ಎಂದು ಚರ್ಚ್ ನ ಹಿರಿಯ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.