ರಾಜಸ್ಥಾನ, ಸೆ 06 (DaijiworldNews/MS): ಕಾಲ್ಗೆಜ್ಜೆ ಕದಿಯಲು ಬಂದ ಕಳ್ಳನೊಬ್ಬ ವೃದ್ದೆಯ ಕಾಲನ್ನೇ ಕತ್ತರಿಸಿದ ಭೀಕರ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ನೈನ್ವಾ ಪೊಲೀಸ್ ವ್ಯಾಪ್ತಿಯ ಕೀರೋ ಕಾ ಜೋಪ್ಡಿಯಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. "75 ವರ್ಷದ ವೃದ್ದೆ ಉಚ್ಚಾಬಿ ಬಾಯಿ ಸೈನಿ ಮನೆಯಲ್ಲಿ ಒಬ್ಬರೇ ಮನೆಯಲ್ಲಿ ಮಲಗಿದ್ದಾಗ ಒಳನುಗ್ಗಿದ್ದ ಇಬ್ಬರು ಕಳ್ಳರು ಕಾಲನ್ನೇ ಕತ್ತರಿಸಿದ ಕಾಲ್ಗೆಜ್ಜೆದೊಂದಿಗೆ ಪರಾರಿಯಾಗಿದ್ದಾರೆ. ಆದರೆ, ಇನ್ನೊಂದು ಕಾಲಿನ ಗೆಜ್ಜೆಯನ್ನು ದೋಚಲು ಸಾಧ್ಯವಾಗಲಿಲ್ಲ" ಎಂದು ನೈನ್ವಾ ಎಸ್ಎಚ್ಒ ಬಾಬುಲಾಲ್ ಮೀನಾ ತಿಳಿಸಿದ್ದಾರೆ.
ಬುಂದಿ ಎಸ್ಪಿ ಜೈ ಯಾದವ್ ಮತ್ತು ಇತರ ಹಿರಿಯ ಅಧಿಕಾರಿಗಳು ಶುಕ್ರವಾರ ಮಹಿಳೆಯ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ.
ವೃದ್ದೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೋಟಾದ ಎಂಬಿಎಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಹೊಸದಾಗಿ ಪರಿಚಯಿಸಲಾದ ಕಡ್ಡಾಯ ಎಫ್ಐಆರ್ ವ್ಯವಸ್ಥೆಯೇ ಕಾರಣ ಎಂದು ರಾಜಸ್ಥಾನ ಮುಖ್ಯಮಂತ್ರಿ ಹೇಳುವ ಕೆಲವೇ ಗಂಟೆಗಳ ಮೊದಲು ಈ ದಾಳಿ ನಡೆದಿದೆ.