ನವದೆಹಲಿ, ಸೆ 06 (DaijiworldNews/MS): ದೇಶಾದ್ಯಂತ 5,000 ಕಾರುಗಳನ್ನು ಕದ್ದ ಆರೋಪ ಹೊತ್ತಿರುವ "ಭಾರತದ ಅತಿದೊಡ್ಡ ಕಾರು ಕಳ್ಳ" ಎಂಬ ಕುಖ್ಯಾತಿ ಹೊಂದಿರುವ ಅನಿಲ್ ಚೌಹಾಣ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
52 ವರ್ಷದ ಅನಿಲ್ ಚೌಹಾಣ್ ಕಾರು ಕಳ್ಳರ ತಂಡದ ಕಿಂಗ್ ಪಿನ್. ಈತನ ವಿರುದ್ಧ 180 ಪ್ರಕರಣಗಳು ದಾಖಲಾಗಿವೆ.
ಕಳೆದ 27 ವರ್ಷಗಳಿಂದ ಕಾರು ಕಳ್ಳತನವನ್ನೇ ದಂಧೆ ಮಾಡಿಕೊಂಡಿದ್ದ. ದೇಶದ ಎಲ್ಲಾ ಮಹಾನಗರಗಳನ್ನು ಸುತ್ತಿ ಕಾರು ಕದಿಯುತ್ತಿದ್ದ. ಬಂಧನದ ವೇಳೆ , ಪೊಲೀಸರು ಆರು ದೇಶ ನಿರ್ಮಿತ ಪಿಸ್ತೂಲ್ಗಳು ಮತ್ತು ಏಳು ಜೀವಂತ ಕಾಟ್ರಿಡ್ಜ್ಗಳು, ಒಂದು ಕದ್ದ ಮೋಟಾರ್ಸೈಕಲ್ ಮತ್ತು ಒಂದು ಕದ್ದ ಕಾರನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.
ಇದುವರೆಗೆ 5000ಕ್ಕೂ ಹೆಚ್ಚು ಕಾರುಗಳನ್ನು ಕದ್ದು ಮಾರಾಟ ಮಾಡಿರುವ ಅನಿಲ್, ದಿಲ್ಲಿ, ಮುಂಬಯಿ, ಬೆಂಗಳೂರು ಸೇರಿದಂತೆ ದೇಶದ ಹಲವು ಕಡೆ ಬೇಕಾದಷ್ಟು ಆಸ್ತಿ ಮಾಡಿಟ್ಟಿದ್ದ.
ಅಸ್ಸಾಂನ ತೇಜ್ಪುರ ಮೂಲದ ಖಾನ್ಪುರ ಎಕ್ಸ್ಟೆನ್ಶನ್ನ ನಿವಾಸಿ ಅನಿಲ್ ಚೌಹಾನ್ 12 ನೇ ತರಗತಿಯವರೆಗೆ ಓದಿದ್ದ . 90ರ ದಶಕದಲ್ಲಿ ಹೊಟ್ಟೆಪಾಡಿಗೆ ಆಟೊ ಓಡಿಸಿಕೊಂಡಿದ್ದ ಅನಿಲ್, ದಿಲ್ಲಿಯ ಕಾನ್ಪುರ ಏರಿಯಾದಲ್ಲಿ ವಾಸವಾಗಿದ್ದ. 1995ರಲ್ಲಿ ಆಟೊ ಚಾಲನೆಯಿಂದ ನಿರೀಕ್ಷಿತ ದುಡ್ಡು ಬರದೇ ಹೋದಾಗ 1998 ರಿಂದ ಕಾರು ಕದಿಯಲು ಶುರು ಮಾಡಿದ್ದ. ಭಾರತದ ವಿವಿಧ ಭಾಗಗಳಿಂದ 5000 ಕ್ಕೂ ಹೆಚ್ಚು ವಾಹನಗಳನ್ನು ಈವರೆಗೆ ಕದ್ದಿದ್ದಾನೆ.
ಅನಿಲ್ ನನ್ನು ಈ ಹಿಂದೆಯೂ ಹಲವು ಬಾರಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕೂರಿಸಿದ್ದಾರೆ. ನಿಜಾಮುದ್ದೀನ್ ಪೊಲೀಸ್ ಠಾಣೆಯ ಕ್ರಿಮಿನಲ್ ಮೊಕದ್ದಮೆಯಲ್ಲಿ ಐದು ವರ್ಷಗಳ ಕಾಲ ಶಿಕ್ಷೆಗೊಳಗಾಗಿದ್ದ.
ಅನಿಲ್ ಚೌಹಾಣ್ ಅಸ್ಸಾಂ ಸರ್ಕಾರದ ಕ್ಲಾಸ್-1 ಗುತ್ತಿಗೆದಾರರಾಗಿದ್ದ. ಆದರೆ ಜಾರಿ ನಿರ್ದೇಶನಾಲಯ ಈತನ ಅಕ್ರಮ ಆಸ್ತಿ ಮೇಲೆ ದಾಳಿ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ಇದಾದ ಬಳಿಕ ಬ್ಯಾಂಕ್ ಆಸ್ತಿಯನ್ನು ಹರಾಜು ಹಾಕಿದಾಗ ಮತ್ತೆ ಕಳ್ಳತನ ಮಾಡಲು ಆರಂಭಿಸಿದ್ದ.
ಸದ್ಯ ಅಸ್ಸಾಂನಲ್ಲಿ ಭವ್ಯ ಬಂಗಲೆ ಮಾಡಿ ವಾಸವಾಗಿರುವ ಅನಿಲ್ ಮೂವರು ಪತ್ನಿಯರನ್ನು ಹೊಂದಿದ್ದು, ಈತನಿಗೆ ಏಳು ಮಕ್ಕಳಿದ್ದಾರೆ.
ಇತ್ತೀಚೆಗೆ ಕಾರುಗಳ್ಳತನದಿಂದ ಹೆಚ್ಚು ಲಾಭ ಇಲ್ಲ ಎಂದು ತೀರ್ಮಾನಿಸಿದ್ದ ಈತ ತನ್ನ ದಂಧೆಯನ್ನೇ ಬದಲಾಯಿಸಿ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಕೈ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.