ನವದೆಹಲಿ, ಸೆ 06 (DaijiworldNews/MS): ದೆಹಲಿಯ ಸುಪ್ರಸ್ತಿದ್ದವಾದ ರಾಜ್ಪಥ್ ಮತ್ತು ಸೆಂಟ್ರಲ್ ವಿಸ್ತಾದ ಹುಲ್ಲುಹಾಸನ್ನು ’ಕರ್ತವ್ಯ ಪಥ್' ಎಂದು ಮರು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ರಾಜ್ಪಥ್ ಮತ್ತು ಸೆಂಟ್ರಲ್ ವಿಸ್ಟಾಗೆ ಮರು ನಾಮಕರಣ ಮಾಡಿದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ಪ್ರದೇಶವನ್ನು ಈಗ 'ಕರ್ತವ್ಯ ಪಥ್' ಎಂದು ಕರೆಯಲಾಗುವುದು.
ರಾಜ ಎಂದಿರುವುದನ್ನು ಕರ್ತವ್ಯ ಎಂದು ಬದಲಿಸುವ ಮೂಲಕ ಕೇಂದ್ರವು ಇದು ಆಳ್ವಿಕೆ ಮಾಡುವವರ ಕಾಲವಲ್ಲ ಬದಲಾಗಿ ನಿಷ್ಟೆ ಯಿಂದ ದುಡಿಯುವವರ ಕಾಲ ಎಂದು ಹೇಳಲು ಬಯಸುತ್ತಿರುವುದಾಗಿ ವಿಶ್ಲೇಷಿಸಲಾಗಿದೆ. ಇನ್ನು ನವೀಕರಣಕೊಂಡಿರುವ ಸೆಂಟ್ರಲ್ ವಿಸ್ತಾ ಅವೆನ್ಯೂ ಅನ್ನು ಪ್ರಧಾನಿ ಮೋದಿ ಅವರು ಸೆ.೮ ರಂದು ಉದ್ಘಾಟಿಸಲಿದ್ದಾರೆ.
ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳನ್ನು ತೊಡೆದುಹಾಕಲು ಒತ್ತು ನೀಡಿದ್ದರು. ಈ ಹಿಂದೆ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ದೆಹಲಿಯಲ್ಲಿ ಪ್ರಧಾನಿ ನಿವಾಸಕ್ಕೆ ಹೋಗುವ ರೇಸ್ ಕೋರ್ಸ್ ರಸ್ತೆಯ ಹೆಸರನ್ನು 'ಲೋಕ ಕಲ್ಯಾಣ ಮಾರ್ಗ' ಎಂದು ಬದಲಾಯಿಸಲಾಗಿತ್ತು.