ಬೆಂಗಳೂರು, ಸೆ 06 (DaijiworldNews/MS): "ಕೊಟ್ಟ ಮಾತನ್ನೂ ಉಳಿಸಿಕೊಳ್ಳುವ ಬದ್ಧತೆ ಈ ಸರ್ಕಾರಕ್ಕಿಲ್ಲವೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ಎಸಿ. ಎಸ್ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸುವ ಸುತ್ತೋಲೆ ಹಿಂಪಡೆದ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, " ರಾಜ್ಯದ ಬಿಜೆಪಿ ಸರ್ಕಾರ ಕೇವಲ 15 ದಿನದ ಹಿಂದಷ್ಟೇ ಎಸ್ ಸಿ/ಎಸ್ ಟಿ ಸಮುದಾಯದ ಬಿಪಿಎಲ್ ಕಾರ್ಡ್ದಾರರಿಗೆ 75 ಯುನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ ಈಗ ಏಕಾಏಕಿ ಹಿಂಪಡೆದಿದೆ. ಬೊಮ್ಮಾಯಿ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ನಾಟಕ ಯಾಕೆ ಆಡಬೇಕು? ಕೊಟ್ಟ ಮಾತನ್ನೂ ಉಳಿಸಿಕೊಳ್ಳುವ ಬದ್ಧತೆ ಈ ಸರ್ಕಾರಕ್ಕಿಲ್ಲವೆ" ಎಂದು ಪ್ರಶ್ನಿಸಿದ್ದಾರೆ.
ಉಚಿತ ವಿದ್ಯುತ್ಗಾಗಿ ಎಸ್ ಸಿ/ಎಸ್ ಟಿ ಸಮುದಾಯದವರು ಈ ಸರ್ಕಾರಕ್ಕೇನು ಅರ್ಜಿಯೂ ಹಾಕಿರಲಿಲ್ಲ, ಭಿಕ್ಷೆಯೂ ಬೇಡಿರಲಿಲ್ಲ. ಸ್ವತಃ ಸರ್ಕಾರವೇ 75 ಯುನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ, ಈಗ ಸದ್ದೇ ಇಲ್ಲದೆ ವಾಪಾಸ್ ಪಡೆದಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ರಾಜಧರ್ಮ. ಈ ಬೊಮ್ಮಾಯಿ ಸರ್ಕಾರಕ್ಕೆ ತನ್ನ ಮಾತಿನ ಮೇಲೇ ನಿಲ್ಲುವ ಯೋಗ್ಯತೆಯಿಲ್ಲವೇ ಎಂದು ಲೇವಡಿ ಮಾಡಿದ್ದಾರೆ.
ಇನ್ನೊಂದೆಡೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುತ್ತಿದ್ದ ಅಮೃತಜ್ಯೋತಿ ಯೋಜನೆಯನ್ನು ರದ್ದು ಮಾಡಿಲ್ಲ ಯೋಜನೆಗೆ ಸಂಬಂಧಿಸಿ ವಿಧಿಸಿದ ಕೆಲವು ನಿಯಮಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಆಗಸ್ಟ್ 24ರಂದು ಹೊರಡಿಸಿದ್ದ ಸುತ್ತೋಲೆಯನ್ನು ಮಾತ್ರ ಹಿಂಪಡೆಯಲಾಗಿದೆ. ನಿಯಮಾವಳಿಗಳನ್ನು ರದ್ದುಪಡಿಸಲಾಗಿದೆಯೇ ಹೊರತು ಯೋಜನೆಯನ್ನಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.