ನವದೆಹಲಿ, ಸೆ 06 (DaijiworldNews/HR): ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಉಪ ಕಾನೂನು ಸಲಹೆಗಾರರಾಗಿದ್ದ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಫೋಟಕ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಸಿಬಿಐ ತಳ್ಳಿಹಾಕಿದೆ.
ಈ ಕುರಿತು ಮಾತನಾಡಿರುವ ಮನೀಶ್ ಸಿಸೋಡಿಯಾ, ಸಿಬಿಐನ ಅಧಿಕಾರಿ ಜಿತೇಂದ್ರ ಕುಮಾರ್ ಅವರಿಗೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸುವಂತೆ ಒತ್ತಡ ಹೇರಲಾಗಿದ್ದ ಹಿನ್ನೆಲೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದಿದ್ದಾರೆ.
ಇನ್ನು ಸಿಸೋಡಿಯಾ ಅವರ ಹೇಳಿಕೆಯನ್ನು ಸಿಬಿಐ ತಳ್ಳಿಹಾಕಿದ್ದು, ಮನೀಶ್ ಅವರ ಹೇಳಿಕೆಯು ತಪ್ಪುದಾರಿಗೆಳೆಯುವಂತೆ ಮಾಡುತ್ತಿದೆ. ಈ ಹೇಳಿಕೆ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದೆ.