ಮುಂಬೈ, ಸೆ 06 (DaijiworldNews/MS): ಮುಂಬರುವ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ಹಿನ್ನಲೆಯಲ್ಲಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಬಿಜೆಪಿ ಘಟಕದ ಪ್ರಮುಖರು ಭಾಗಿಯಾಗಿದ್ದ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮಾತನಾಡಿದ ಶಾ, "ಶಿವಸೇನೆಯೂ ಉದ್ಬವ್ ಠಾಕ್ರೆ ಬಿಜೆಪಿಗೆ ನಂಬಿಕೆ ದ್ರೋಹ ಎಸಗಿದ್ದುಅವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ" ಎಂದು ಹೇಳಿದ್ದಾರೆ
2019ರ ವಿಧಾನಸಭೆ ಚುನಾವಣೆ ನಂತರ ಉದ್ಧವ್ ಠಾಕ್ರೆ ಬಿಜೆಪಿಗೆ ಮೋಸ ಮಾಡಿದ್ದಾರೆ. ರಾಜಕೀಯದಲ್ಲಿ ಏನನ್ನಾದರೂ ಸಹಿಸಬಹುದು ಆದರೆ ನಂಬಿಕೆ ದ್ರೋಹವಲ್ಲ ಹೀಗಾಗಿ ಪಾಠ ಕಲಿಸುವ ಸಮಯ ಇದೀಗ ಬಂದಿದೆ. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡಣವೀಸ್ ಅವರ ಆಡಳಿತದ ಹೆಸರಿನಲ್ಲಿ ಮತ ಕೇಳಿದ್ದ ಶಿವಸೇನಾ ಉದ್ಧವ್ ಠಾಕ್ರೆ ಬಳಿಕ ಜನರಿಗೆ ಮೋಸ ಮಾಡಿತು. ರಾಜಕೀಯದಲ್ಲಿ ದ್ರೋಹ ಬಗೆಯುತ್ತೀರಿ ಎಂದರೆ, ಪ್ರಾಮಾಣಿಕ ರಾಜಕೀಯದಲ್ಲಿ ಮುಂದುವರಿಯಲಾರಿರಿ ಎಂದರ್ಥ ಎಂದು ಹೇಳಿದ್ದಾರೆ.
ಶಿವಸೇನೆಗೆ ಪಾಲಿಕೆ ಚುನಾವಣೆಯಲ್ಲಿ ಪಾಠ ಕಲಿಸುವಂತೆ ಹಾಗೂ ಬಿಎಂಸಿ ಚುನಾವಣೆಯಲ್ಲಿ ಶೇ 50 ಸ್ಥಾನಗಳಲ್ಲಿ ಬಿಜೆಪಿ ಪಕ್ಷ ಜಯಿಸಬೇಕು ಎಂದು ರಾಜ್ಯ ನಾಯಕರಿಗೆ, ಶಾ ಗುರಿ ನೀಡಿದ್ದಾರೆ.