ದೆಹಲಿ, ಸೆ 05 (DaijiworldNews/SM): 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ಬಳಿ ಒಗ್ಗಟ್ಟಿನ ಮಂತ್ರ ಜಮಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish kumar) ಸೋಮವಾರ ದಿಲ್ಲಿ ತಲುಪಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು ಭೇಟಿ ಮಾಡಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಪ್ರತಿಪಕ್ಷಗಳ ಏಕತೆಯನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ.
ನಿತೀಶ್ ಕುಮಾರ್ ಅವರ ದೆಹಲಿ ಪ್ರವಾಸದಲ್ಲಿ ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಮತ್ತು ರಾಜ್ಯ ಸಚಿವರಾದ ಸಂಜಯ್ ಝಾ ಮತ್ತು ಅಶೋಕ್ ಚೌಧರಿ ಸಾಥ್ ನೀಡಿದ್ದಾರೆ. ಇದರ ನಡುವೆ ದೆಹಲಿಯಲ್ಲಿರುವ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬಿಹಾರ ಸಿಎಂ ನಿತೀಶ್ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಭೇಟಿ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಉಪಸ್ಥಿತರಿದ್ದರು.
ಇನ್ನು ನಿತೀಶ್ ಕುಮಾರ್ ಭೇಟಿ ಬಳಿಕ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಜನತಾ ಪರಿವಾರ ಮತ್ತೆ ಒಗ್ಗೂಡಬೇಕೆಂದು ಎಲ್ಲರ ಆಶಯವಾಗಿದೆ. ದೇಶ, ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಜಯಪ್ರಕಾಶ ನಾರಾಯಣರವರ ಆಂದೋಲದಿಂದ ಅಂದು ಆರಂಭವಾಗಿದ್ದ ಜನತಾ ಪಾರ್ಟಿ ಒಡೆದು ಹೋಗಿದೆ. ಜನತಾ ಪರಿವಾರ ಒಂದಾಗುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ. ಪ್ರಾರಂಭಿಕ ಹಂತವಾಗಿ ನಿತೀಶ್ ಕುಮಾರ್ ಭೇಟಿಯಾಗಿ ಚರ್ಚಿಸಿದ್ದೇನೆ. ದೇಶವನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಒಗ್ಗೂಡುವುದು ಒಳ್ಳೆಯದು ಎಂದರು.
ನಿತೀಶ್ ಕುಮಾರ್ ಅವರು ಮಂಗಳವಾರ ದೆಹಲಿಯಲ್ಲಿ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಎಡಪಕ್ಷಗಳ ನಾಯಕರಾದ ಡಿ ರಾಜಾ ಮತ್ತು ಸೀತಾರಾಮ್ ಯೆಚೂರಿ ಮತ್ತು ಇತರರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ರಾಷ್ಟ್ರಪತಿ ಹಾಗೂ ಉಪಾಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಶೀಘ್ರದಲ್ಲೇ ಮಹಾರಾಷ್ಟ್ರ, ಹರಿಯಾಣ ಮತ್ತು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.