ನವದೆಹಲಿ, ಸೆ 05 (DaijiworldNews/HR): ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7 ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7 ಕ್ಕೆ ಮುಂದೂಡಿದೆ,
ಕರ್ನಾಟಕದ ವಿದ್ಯಾಸಂಸ್ಥೆಯ ತಗರತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲು ಸರ್ಕಾರಿ ಕಾಲೇಜುಗಳ ಅಭಿವೃದ್ಧಿ ಸಮಿತಿಗಳಿಗೆ ಅಧಿಕಾರ ನೀಡಿದ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಅರ್ಜಿಗಳು ಪ್ರಶ್ನಿಸಿವೆ.
ಅರ್ಜಿದಾರರ ಪರ ವಕೀಲರಾದ ಸಂಜಯ್ ಹೆಗ್ಡೆ ತಮ್ಮ ವಾದ ಮಂಡಿಸುವ ವೇಳೆ 'ಹಿಜಾಬ್ ವಿಚಾರವನ್ನೇ ಮುಂದಿಟ್ಟುಕೊಂಡು ಶಿಕ್ಷಣವನ್ನು ನಿರಾಕರಿಸಬಹುದೇ ಎಂಬ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೇಮಂತ್ ಗುಪ್ತಾ, ಸಮವಸ್ತ್ರ ಧರಿಸಬೇಕೆಂದು ಸರಕಾರ ಹೇಳುತ್ತಿದೆ ಆದರೆ ಅದರ ಮೇಲೆ ಬೇರೆ ವಸ್ತ್ರ ಧರಿಸಲು ಅನುಮತಿಸಬೇಕೆಂದು ನೀವು ಹೇಳುತ್ತಿದ್ದೀರಿ. ಇದೊಂದು ಧಾರ್ಮಿಕ ಪದ್ಧತಿಯಾಗಿರಬಹುದು, ಆದರೆ ಸಮವಸ್ತ್ರ ವಿಧಿಸಲಾಗಿರುವ ಶಾಲೆಯಲ್ಲಿ ಹಿಜಾಬ್ ಧರಿಸಬಹುದೇ ಎಂಬ ಪ್ರಶ್ನೆಯಿದೆ ಎಂದರು.