ಜಾರ್ಖಂಡ್, ಸೆ 05 (DaijiworldNews/MS): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಮಾಡಿದ್ದಾರೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಸಿಎಂ ಹೇಮಂತ್ ಸೊರೇನ್ ಪರವಾಗಿ 48 ಮತಗಳು ಚಲಾವಣೆಯಾದವು.
ವಿಶ್ವಾಸ ಮತ ಯಾಚನೆ ವೇಳೆ ಬಿಜೆಪಿ ಶಾಸಕರು ಗದ್ದಲದೊಂದಿಗೆ ಸಭಾತ್ಯಾಗ ಮಾಡಿದರು. ಬಿಜೆಪಿ ಬಹಿಷ್ಕಾರದ ನಡುವೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮಂಡಿಸಿದ ವಿಶ್ವಾಸ ನಿರ್ಣಯವನ್ನು ಜಾರ್ಖಂಡ್ ವಿಧಾನಸಭೆ ಅಂಗೀಕರಿಸಿತು.
ಈ ವೇಳೆ ಪ್ರತಿಕ್ರಿಯಿಸಿದ ಸಿಎಂ ಸೊರೇನ್, ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುವ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು ಅನಿವಾರ್ಯವೆನಿಸಿತ್ತು ಎಂದು ಹೇಳಿದ್ದಾರೆ.
ಕೆಲದಿನಗಳ ಹಿಂದೆ ಮೈನಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ಸೊರೇನ್ ಶಾಸಕ ಸ್ಥಾನ ರದ್ದುಗೊಳಿಸುವಂತೆ ಚುನಾವಣಾ ಆಯೋಗ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದು, ಈ ಬಗ್ಗೆ ರಾಜ್ಯಪಾಲರ ಅಂತಿಮ ನಿರ್ಧಾರ ಹೊರಬೀಳಬೇಕಿದೆ.