ನವದೆಹಲಿ, ಸೆ 05(DaijiworldNews/MS): ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯಲ್ಲಿ ಒಂದು ಲೀಟರ್ ಗೋಧಿ ಹಿಟ್ಟಿನ ಬೆಲೆ 40 ರೂಪಾಯಿ ಆಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದ್ದಾರೆ.
ರಾಮ್ ಲೀಲಾ ಮೈದಾನದಲ್ಲಿ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ರಾಹುಲ್ ಗಾಂಧಿ ಮಾರುಕಟ್ಟೆಯಲ್ಲಿ ದಿನಬಳಕೆ ವಸ್ತುಗಳ ಬೆಲೆ ಯಾವ ರೀತಿಯಲ್ಲಿ ಏರಿಕೆಯಾಗುತ್ತಿದೆ ಎಂಬ ಬಗ್ಗೆ ಉಲ್ಲೇಖಿಸಿದ್ದರು. ಈ ಮೊದಲು ಒಂದು ಲೀಟರ್ ಗೋಧಿ ಬೆಲೆ 22 ರೂಪಾಯಿ ಇತ್ತು, ಇದೀಗ ಒಂದು ಲೀಟರ್ ಗೋಧಿಗೆ 40 ರೂಪಾಯಿ ಆಗಿರುವುದಾಗಿ ತಿಳಿಸಿದ್ದರು. ಆದರೆ, ರಾಹುಲು ಬಳಿಕ ತಪ್ಪನ್ನು ಸರಿಪಡಿಸಿ ಕೆಜಿ ಎಂದು ಹೇಳಿದ್ದರು.
ಆದರೆ, ರಾಹುಲ್ ಅವರಾಡಿದ್ದ ಮಾತನ್ನು ಬಿಜೆಪಿ ನಾಯಕರು ಅವರ ವಿರುದ್ದ ದಾಳಿ ನಡೆಸಲು ಸರಿಯಾಗಿ ಬಳಸಿಕೊಂಡಿದ್ದಾರೆ..ಅಲ್ಲದೆ ಟ್ರೋಲಿಗರಿಗೂ ಅವರ ಮಾತು ಆಹಾರವಾಗಿದೆ.
ರಾಹುಲ್ ಮಾತಿಗೆ ಕುಹಕವಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿಗೆ ಗೋಧಿ ಕೆಜಿಯಲ್ಲಿ ಮಾರಾಟ ಮಾಡುತ್ತಾರೋ, ಲೀಟರ್ ಗಳಲ್ಲಿಯೋ ಎಂಬುದು ತಿಳಿದಿಲ್ಲ ಎಂದಿದ್ದಾರೆ.