ಬೆಳಗಾವಿ, ಸೆ 05(DaijiworldNews/MS): ಮಡಿವಾಳೇಶ್ವರ ಮಠದಲ್ಲಿ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಆಗಿರುವ ಬಸವ ಸಿದ್ಧಲಿಂಗ ಸ್ವಾಮೀಜಿ ಮಠದ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುರುಘಾ ಮಠದ ಶ್ರೀಗಳ ಲೈಂಗಿಕ ಕಿರುಕುಳ ಆರೋಪದ ಬಳಿಕ ಇಬ್ಬರು ಮಹಿಳೆಯರ ಫೋನ್ಕಾಲ್ ಆಡಿಯೋ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಆಡಿಯೋನಲ್ಲಿ ಆತ್ಮಹತ್ಯೆಗೆ ಶರಣಾದ ಬಸವಸಿದ್ಧಲಿಂಗ ಸ್ವಾಮೀಜಿ ಹೆಸರನ್ನೂ ಉಲ್ಲೇಖಿಸಲಾಗಿತ್ತು.
ರಾಜ್ಯದ ಹಲವು ಮಠಾಧೀಶರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಒಂದು ಮಹಿಳೆ ಸಂಭಾಷಣೆಯಲ್ಲಿ ಆರೋಪಿಸುತ್ತಾರೆ. ಆ ಸಂಭಾಷಣೆಯ ನಡುವೆ ಬಸವಸಿದ್ಧಲಿಂಗ ಸ್ವಾಮಿಯವರ ಹೆಸರನ್ನು ಮಹಿಳೆ ಉಲ್ಲೆಖಿಸುತ್ತಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣದಿಂದಲೇ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇದುವರೆಗೂ ತಿಳಿದುಬಂದಿಲ್ಲ.ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಯಾವ ಕಾರಣ ನೀಡಿದ್ದಾರೆ ಎಂಬುದನ್ನು ಪೊಲೀಸರು ಇನ್ನೂ ಮಾಹಿತಿ ನೀಡಿಲ್ಲ.