ತಿರುಪತಿ, ಸೆ 05(DaijiworldNews/MS): ತಿರುಪತಿಯಲ್ಲಿ ತಿಮ್ಮಪ್ಪನ ಸೇವೆಗೆ ಭಕ್ತರೊಬ್ಬರಿಗೆ ಒಂದು ವರ್ಷದ ಒಳಗೆ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಅಥವಾ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಎಂದು ತಿರುಪತಿ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿಯಾದ ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ)ಗೆ ಸೇಲಂ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಕೆ.ಆರ್. ಹರಿಭಾಸ್ಕರ್ ಎಂಬವರು 2006ರಲ್ಲಿ 12,250 ರೂ. ಪಾವತಿಸಿ ವಿಶೇಷ ಉತ್ರ ಅಲಂಕಾರ (ವಸ್ತ್ರಾಲಂಕಾರ) ಸೇವೆಗೆ ಅವಕಾಶ ಕೋರಿದ್ದರು. ಇವರಿಗೆ 2020ರ ಜುಲೈ 10ಕ್ಕೆ ಸೇವೆಯ ದಿನಾಂಕವನ್ನು ಟಿಟಿಡಿ ನಿಗದಿಪಡಿಸಿತ್ತು.
ಆದರೆ ಆ ಸಂದರ್ಭದಲ್ಲಿ ಕೊರೊನಾ ಕಾಣಿಸಿಕೊಂಡ ಕಾರಣ ದೇವಸ್ಥಾನದ ಎಲ್ಲ ವಿಶೇಷ ಪೂಜೆಗಳನ್ನು ರದ್ದುಗೊಳಿಸಲಾಗಿದ್ದು, ಹರಿಭಾಸ್ಕರ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮತ್ತೊಂದು ದಿನಾಂಕವನ್ನು ನಿಗದಿಪಡಿಸುವಂತೆ ಮನವಿ ಮಾಡಿದ್ದರು.
ಆದರೆ ಇದಕ್ಕೆ ನಿರಾಕರಿಸಿದ್ದ ಟಿಟಿಡಿ ವಿಶೇಷ ವಿಐಪಿ ದರ್ಶನ ಪಡೆಯಲು ಅಥವಾ ಮೊತ್ತದ ಮರುಪಾವತಿಗಾಗಿ ಅರ್ಜಿ ಸಲ್ಲಿಸುವಂತೆ ಹರಿಭಾಸ್ಕರ್ ಅವರಿಗೆ ಸೂಚಿಸಿತು.