ನವದೆಹಲಿ, ಸೆ 04 (DaijiworldNews/DB): ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ರವಿವಾರ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿದೆ. ಮೆಹಾಂಗಾಯೆ ಪರ್ ಹಲ್ಲಾ ಬೋಲ್ ಹೆಸರಿನಲ್ಲಿ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಹೇರಿಕೆ, ಹಣದುಬ್ಬರ, ಬ್ಯಾಂಕ್ ಬಡ್ಡಿದರ ಹೆಚ್ಚಳ, ನಿರುದ್ಯೋಗದ ಸಮಸ್ಯೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದೆ. ದಿನ ಬಳಕೆಯ ವಸ್ತುಗಳು ದುಬಾರಿಯಾಗಿದೆ. ಇದು ಮೋದಿ ಸರ್ಕಾರದ ಕೊಡುಗೆ ಎಂದು ಘೋಷಣೆ ಕೂಗಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ಸಿಗರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ತಿಂಗಳು ಹಣದುಬ್ಬರ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರ ಜೀವನವೇ ದುಸ್ತರವಾಗಿದೆ. ನಿರುದ್ಯೋಗದಿಂದಾಗಿ 2021ರಲ್ಲಿ 11,724 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು 2020ನೇ ಇಸವಿಗಿಂತ ಶೇ. 26ರಷ್ಟು ಹೆಚ್ಚಾಗಿದೆ. ಮೋದಿ ಮತ್ತು ಬಿಜೆಪಿ ಬೆಂಬಲಿಗರೇ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿ ಕಾರಿದರು.
ಯುಪಿಎ ಸರ್ಕಾರ ನಿರ್ಗಮಿಸುವುದಕ್ಕೂ ಮುನ್ನ ಇದ್ದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಮತ್ತು ಈಗಿನ ದರವನ್ನು ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನವನ್ನೂ ಮಾಡಲಾಗಿದೆ.
ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾಯಕರಾದ ರಾಜೀವ್ ಶುಕ್ಲಾ, ದೀಪೇಂದರ್ ಹೂಡ, ಜೈರಾಮ್ ರಮೇಶ್, ಮಣಿಶಂಕರ್ ಅಯ್ಯರ್, ಅಧೀರ್ ರಂಜನ್ ಚೌಧರಿ, ಗೌರವ್ ಗಂಗೋಯಿ, ಪಿ. ಚಿದಂಬರಂ, ಕುಮಾರಿ ಶೆಲ್ಜಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.