ತಿರುವನಂತಪುರ, ಸೆ 04 (DaijiworldNews/DB): ವ್ಯಕ್ತಿಯೊಬ್ಬ ತನ್ನ ಮೇಲೆ ದಾಳಿ ಮಾಡಲು ಬಂದ ಚಿರತೆಯೊಂದಿಗೆ ಕಾದಾಡಿ ಅದನ್ನು ಕೊಂದು ತನ್ನ ಜೀವ ಉಳಿಸಿಕೊಂಡಿರುವ ಘಟನೆ ಇಡುಕಿ ಜಿಲ್ಲೆಯ ಮಾಂಕುಳಂ ಗ್ರಾಮದ ಬಳಿ ನಡೆದಿದೆ.
ಗೋಪಾಲ್ (47) ಚಿರತೆಯೊಂದಿಗೆ ಸೆಣಸಾಡಿ ಜೀವ ಉಳಿಸಿಕೊಂಡವರು. ಸುಮಾರು 12 ವರ್ಷದ ಹೆಣ್ಣು ಚಿರತೆಯೊಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ ಮೇಲೆರಗಿದೆ. ಅಲ್ಲದೆ ಅವರ ಕೈಗೆ ಕಚ್ಚಿದೆ. ಆದರೆ ಆತಂಕಗೊಳ್ಳದ ಗೋಪಾಲ್ ಇನ್ನೊಂದು ಕೈಯಲ್ಲಿ ಚಿರತೆಯ ಕತ್ತನ್ನು ಬಲವಾಗಿ ಹಿಡಿದು ನೆಲಕ್ಕುರುಳಿಸಿದ್ದಾರೆ. ಬಳಿಕ ಕಾಲಿನಿಂದ ಚೂರಿ ಎಳೆದುಕೊಂಡು ಚಿರತೆಗೆ ಇರಿದಿದ್ದಾರೆ. ಇರಿತದಿಂದ ತಲೆಯ ಭಾಗದಲ್ಲಿ ಗಂಭೀರ ಗಾಯಗೊಂಡ ಚಿರತೆ ಸಾವನ್ನಪ್ಪಿದೆ.
ಗೋಪಾಲ್ ಅವರ ಕೈ, ಕಾಲು ಮತ್ತು ಭುಜಕ್ಕೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಚಿರತೆಯ ಮೃತದೇಹವನ್ನು ಅರಣ್ಯ ಸಿಬಂದಿಯವರು ಸ್ಥಳದಿಂದ ಸಾಗಸಿದ್ದಾರೆಂದು ತಿಳಿದು ಬಂದಿದೆ.