ಜಮ್ಮು, ಸೆ 04 (DaijiworldNews/DB): ದೇಶದ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದಾಗ ಭದ್ರತಾ ಪಡೆಗಳ ಕೈಗೆ ಸಿಕ್ಕಿ ಜೈಲುಪಾಲಾಗಿದ್ದ ಪಾಕ್ ಭಯೋತ್ಪಾದಕ ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಲಷ್ಕರ್ ಇ ತಯ್ಯಬಾ ಗುಂಪಿನ ಉಗ್ರ ತಬ್ರಕ್ ಹುಸೇನ್ (32) ಮೃತಪಟ್ಟಾತ. ಶನಿವಾರ ಸಂಜೆ ಈತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಸೇನಾಧಿಕಾರಿ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಈತ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದಾಗ ಭದ್ರತಾ ಪಡೆಗಳ ಕೈಗೆ ಸಿಕ್ಕಿ ಬಿದ್ದಿದ್ದ. ಆಗಸ್ಟ್ 21ರಂದು ಈತನನ್ನು ಬಂಧಿಸಲಾಗಿತ್ತು. ಬಂಧನದ ಸಂದರ್ಭ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕಾಗಿ ಗುಂಡು ಹಾರಿಸಲಾಗಿತ್ತು. ಇದರಿಂದ ಆತನನ್ನು ರಾಜೋರಿಯ ಮಿಲಿಟರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲದೆ ಆತನ ಜೀವ ಉಳಿಸುವುದಕ್ಕಾಗಿ ಭಾರತೀಯ ಯೋಧರು ಮೂರು ಯುನಿಟ್ ರಕ್ತ ನೀಡಿದ್ದರು. ಬಳಿಕ ಸರ್ಜರಿ ನಡೆಸಲಾಗಿತ್ತು. ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿಗೆ ಯೋಜನೆ ರೂಪಿಸಲಾಗಿತ್ತು ಎಂಬುದಾಗಿ ವಿಚಾರಣೆ ವೇಳೆ ಈತ ಬಹಿರಂಗಪಡಿಸಿದ್ದ.