ಜಮ್ಮು, ಸೆ 04 (DaijiworldNews/DB): ಜಮ್ಮುವಿನ ವಿವಿಧೆಡೆ ಶನಿವಾರ ರಾತ್ರಿ ಸುರಿದಿರುವ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಭೂ ಕುಸಿತ ಸಂಭವಿಸಿದೆ. ಸಂಚಾರಕ್ಕೂ ತೊಡಕಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲಾಗಿದೆ.
ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೆಫೆಟೇರಿಯಾ ಮತ್ತು ಮೆಹದ್ ಬಳಿ ಭೂಕೂಸಿತ ಸಂಭವಿಸಿದೆ. ಅಲ್ಲಿನ ಬೆಟ್ಟ ಗುಡ್ಡಗಳಿಂದ ಭಾರೀ ಗಾತ್ರದ ಕಲ್ಲುಗಳು ರಸ್ತೆ ಮೇಲೆ ಉರುಳಿ ಬೀಳುತ್ತಿದೆ. ಯಾವುದೇ ಅಪಾಯಗಳು ಸಂಭವಿಸದಿರಲು ಮುನ್ನೆಚ್ಚರಿಕಾ ಕ್ರಮವಾಗಿ ಈ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳುತಿಳಿಸಿದ್ದಾರೆ.
ದೇಶದ ಇತರೆಡೆಗಳಿಂದ ಕಾಶ್ಮೀರ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆ ಈ ಹೆದ್ದಾರಿಯಾಗಿದೆ. ಹೀಗಾಗಿ ಸಂಚಾರ ನಿರ್ಬಂಧವನ್ನು ತೆರವುಗೊಳಿಸಿ ಶೀಘ್ರ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.
ಜಮ್ಮು ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಕೂಡಾ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಪರಿಣಾಮ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ಪ್ರಯಾಣಿಕರು, ದೈನಂದಿನ ಕೆಲಸಗಳಿಗೆ ತೆರಳುವವರಿಗೆ ಭಾರೀ ಸಮಸ್ಯೆಯಾಗಿದೆ.